Site icon Suddi Belthangady

ನಿಟ್ಟಡೆ: ಕುಂಭಶ್ರೀ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ‘ಸಂಕಲ್ಪ 2025’ ಓರಿಯಂಟೇಶನ್

ನಿಟ್ಟಡೆ: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಾರ್ಗದರ್ಶಕವಾಗಿ ‘ಸಂಕಲ್ಪ 2025’ ಓರಿಯಂಟೇಶನ್ ಕಾರ್ಯಕ್ರಮವು ಕುಂಭಶ್ರೀ ಪಿ.ಯು. ಕಾಲೇಜು, ನಿಟ್ಟಡೆ, ವೇಣೂರುನಲ್ಲಿ ಜೂ.5ರಂದು ವಿಜೃಂಭಣೆಯಿಂದ ಜರಗಿತು. “ನೀವು ಕನಸು ಕಾಣಲೇಬೇಕು ನಿಮ್ಮ ಕನಸುಗಳು ನಿಜವಾಗುವ ಮುನ್ನ” ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಕ್ರಮವು ಹೊಸಬರ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ನಡೆಯಿತು.

ಕಾರ್ಯಕ್ರಮದ ಆರಂಭದಲ್ಲಿ ಸುಮನ್ (ಕನ್ನಡ ವಿಭಾಗ) ಸ್ವಾಗತ ಭಾಷಣ ನೀಡಿದರು. ಪ್ರಾಚಾರ್ಯರು, ಮುಖ್ಯ ಅತಿಥಿಗಳು ಹಾಗೂ ಉಪನ್ಯಾಸಕರು ದೀಪ ಬೆಳಗಿಸಿ ಉದ್ಘಾಟಿಸಿದರು.
ಪ್ರಾಚಾರ್ಯರಾಗಿರುವ ಓಮನಾ ಎಂ.ಎ. (ಅರ್ಥಶಾಸ್ತ್ರ ವಿಭಾಗ) ಅವರು ತಮ್ಮ ಭಾಷಣದಲ್ಲಿ ನೂತನ ವಿದ್ಯಾರ್ಥಿಗಳನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿ, ಶಿಕ್ಷಣದ ಮೂಲಕ ವ್ಯಕ್ತಿತ್ವ ನಿರ್ಮಾಣ ಮಾಡುವ ಸಂಸ್ಥೆಯ ದೃಷ್ಟಿಕೋನವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್.ಬಿ.ಐ. ವೆಣೂರಿನ ಶಾಖಾ ವ್ಯವಸ್ಥಾಪಕ ಹಿತೇಶ್ ಕುಮಾರ್ ಎಸ್.ವೈ. “ಅಭಿವೃದ್ಧಿ ಸಾಧ್ಯವಾಗಬೇಕಾದರೆ ವಿದ್ಯಾರ್ಥಿಗಳು ತಮಗೆ ಇರುವ ಪೋಷಕರ ಕನಸನ್ನು ಅರ್ಥಮಾಡಿಕೊಳ್ಳಬೇಕು. ಆ ಕನಸು ನನಸಾಗಿಸುವ ಹೊಣೆ ತಮ್ಮದಾಗಿದೆ,” ಎಂದು ಹೇಳಿದರು. ಎಸ್.ಎಸ್. ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಲಿಂಗರಾಜು “ಶಿಕ್ಷಣವೆಂಬುದು ವ್ಯಕ್ತಿತ್ವ ವಿಕಾಸಕ್ಕೆ ಮುನ್ನಡೆಸುವ ಶಕ್ತಿಯಾಗಿದೆ. ವಿದ್ಯಾರ್ಥಿಗಳು ಸದಾ ಗುರಿಯತ್ತ ಕಾಯಕ ಶೀಲದಿಂದ ನಡೆಯಬೇಕು. ಶಿಸ್ತಿನ ಜೀವನವೇ ಯಶಸ್ಸಿನ ಮೂಲವಾಗಿದೆ,” ಎಂದು ಉಪದೇಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಸ್ಥಾಪಕ ಗಿರೀಶ್ ಕೆ.ಹೆಚ್. “ಶಿಸ್ತಿನಿಂದ ಹಾಗೂ ದೃಢ ಸಂಕಲ್ಪದಿಂದ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಸಾಧಿಸಬಹುದು. ಶಿಕ್ಷಣದೊಂದಿಗೆ ಉತ್ತಮ ವ್ಯಕ್ತಿತ್ವ ನಿರ್ಮಾಣವೂ ಮುಖ್ಯ,” ಎಂದು ಸಲಹೆ ನೀಡಿದರು. ಹಾಗೂ ಸಂಸ್ಥೆಯ ಸಂಚಾಲಕರು ಹಾಗೂ ಗಣಿತ ವಿಭಾಗದ ಉಪನ್ಯಾಸಕ ಅಶ್ವಿತ್ ಕುಲಾಲ್ ಅವರು ಸಂಸ್ಥೆಯ ಪ್ರತಿನಿಧಿಯಾಗಿ ಸ್ಫೂರ್ತಿದಾಯಕ ಭಾಷಣವನ್ನು ನೀಡಿದರು.

ವಿಶೇಷ ಆಕರ್ಷಣೆಯಾಗಿ ನಡೆದ ಒರಿಯೆಂಟೇಷನ್ ಕಾರ್ಯಕ್ರಮದಲ್ಲಿ ಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಮನೋಜ್ ಎಸ್. ಅವರು ನೀಟ್ ಮತ್ತು ವೈದ್ಯಕೀಯ ಭವಿಷ್ಯದ ಬಗ್ಗೆ, ಉಪನ್ಯಾಸಕಿ ಲಿಖಿತಾ ಎಂ. (ಭೌತಶಾಸ್ತ್ರ ವಿಭಾಗ) ಅವರು ಓಇಇಖಿ ಪರೀಕ್ಷೆ ಹಾಗೂ ಇಂಜಿನಿಯರಿಂಗ್ ಪ್ರವೇಶಕ್ಕೆ ಬೇಕಾದ ಮಾಹಿತಿ ನೀಡಿದರು. ಉಪನ್ಯಾಸಕಿ ಶರಣ್ಯ ಕೆ.ಎಸ್. (ವಾಣಿಜ್ಯ ವಿಭಾಗ) ಅವರು ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಪರೀಕ್ಷೆಗಳ ಕುರಿತು ವಿವರಿಸಿದರು.

ಕಾರ್ಯಕ್ರಮವನ್ನು ದ್ವಿತೀಯ ಪಿಯುಸಿ ಸೈನ್ಸ್ ವಿಭಾಗದ ವಿದ್ಯಾರ್ಥಿನಿ ಚೈತನ್ಯ ಮತ್ತು ಶ್ರೀಷಾ ನಿರೂಪಿಸಿದರು. ಹಾಗೂ ಕಾರ್ಯಕ್ರಮದ ಅಂತ್ಯದಲ್ಲಿ ಉಪನ್ಯಾಸಕ ಸಂತೋಷ್ (ರಸಾಯನಶಾಸ್ತ್ರ ವಿಭಾಗ) ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡಿತು.

Exit mobile version