Site icon Suddi Belthangady

ಮೂಡಬಿದಿರೆಯ ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಅಭಿವಿನ್ಯಾಸ ಕಾರ್ಯಕ್ರಮ

ಬೆಳ್ತಂಗಡಿ: ಮೂಡಬಿದಿರೆಯ ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮವು ಮೂಡುಬಿದಿರೆಯ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಜೂ.4ರಂದು ನಡೆಯಿತು.

ಟ್ರಸ್ಟಿ ಮತ್ತು ಕಾಲೇಜಿನ ಪ್ರಾಂಶುಪಾಲರಾಗಿರುವಂತಹ ಡಾ. ಎಸ್. ಎನ್. ವೆಂಕಟೇಶ್ ನಾಯಕ್ ರವರು ಸ್ವಾಗತಿಸಿ ” ಹಿಂದಿನ ಕಾಲದ ಮತ್ತು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳಿವೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಕುರಿತು ಸರಿಯಾದ ಮಾರ್ಗದರ್ಶನ ಮಾಡುವವರಿರಲಿಲ್ಲ ಆದರೆ ಇಂದು ನಿಮಗೆ ಉತ್ತಮ ಅವಕಾಶಗಳಿವೆ. ನಿಮ್ಮ ಗುರಿಯನ್ನು ತಲುಪುವವರೆಗೂ ಪ್ರಯತ್ನಿಸಿ ” ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಟ್ರಸ್ಟಿ ಚಂದ್ರಶೇಖರ ರಾಜೇ ಅರಸ್ ಮಾತನಾಡಿ ಪೋಷಕರ ಕನಸನ್ನು ನನಸಾಗಿಸುವುದೇ ನಮ್ಮ ಗುರಿಯಾಗಬೇಕು. ಇದೆಲ್ಲದರ ಯಶಸ್ಸಿಗೆ ನಮ್ಮ ಯೋಜನೆಯು ಸರಿಯಾಗಿರಬೇಕು ಮತ್ತು ಯಶಸ್ಸಿಗೆ ಶ್ರಮ ಅತೀ ಮುಖ್ಯ ಜೊತೆಗೆ ಯಾವ ರೀತಿಯ ಯೋಜನೆಗಳನ್ನು ಮಾಡಬೇಕು ಯಾವ ರೀತಿಯಲ್ಲಿ ಪರೀಕ್ಷೆಯನ್ನ ಎದುರಿಸಬೇಕು ಎಂದು ವಿವರಿಸಿದರು.

ಟ್ರಸ್ಟಿ ಸುಭಾಷ್ ಝಾ ಮಾತನಾಡಿ ನಿಮ್ಮ ಪದವಿ ಪೂರ್ವ ಶಿಕ್ಷಣವನ್ನು ಯುದ್ಧದ ರೀತಿಯಲ್ಲಿ ಎದುರಿಸಬೇಕು ಮತ್ತು ನಿಮ್ಮ ಪ್ರಯಾಣ ದಲ್ಲಿ ಬರುವ ಎಲ್ಲಾ ಸವಾಲುಗಳನ್ನು ವೀರರಂತೆ ಎದುರಿಸಿ ಎಂದರು. ಜೊತೆಗೆ ನಿಮ್ಮ ಅರೋಗ್ಯದ ಬಗ್ಗೆ ಗಮನ ಹರಿಸಿ ಹಾಗೂ ಎರಡು ವರ್ಷಗಳ ಕಾಲ ನೀವು ಇಷ್ಟ ಪಟ್ಟು ಓದಿದಲ್ಲಿ, ಶಿಸ್ತು ಪಾಲಿಸಿದಲ್ಲಿ ಯಶಸ್ಸು ಖಂಡಿತ ಎಂದರು.

ಟ್ರಸ್ಟಿ ಶರತ್ ಗೋರೆ ಮಾತನಾಡಿ ಜೆಇಇ, ನೀಟ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆ ಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಮತ್ತು ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ಮಹತ್ವವನ್ನು ತಿಳಿ ಹೇಳಿದರು. ಹಾಗೂ ಅವಕಾಶಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿ ವಿದ್ಯಾರ್ಥಿಗಳು ಸಮರ್ಪಣಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು. ಟ್ರಸ್ಟಿ ಯೋಗೇಶ್ ಬೆಡೇಕರ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಅರೋಗ್ಯವನ್ನು ಯಾವ ರೀತಿಯಲ್ಲಿ ಕಾಪಾಡಿಕೊಳ್ಳಬೇಕು ಮತ್ತು ವಿದ್ಯಾರ್ಥಿ ಗಳು ಸುಚಿತ್ವ, ಶಿಸ್ತು, ಪಾಲಿಸಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಟ್ರಸ್ಟಿ ಮೆಹಬೂಬ್ ಭಾಷಾ ಮಾತನಾಡಿ ನಮ್ಮ ಸಂಸ್ಥೆಯು ನಿಮ್ಮ ಯಶಸ್ಸಿಗೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಯನ್ನ ಕಲ್ಪಿಸುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಅಧಿಕಾರಿ ಅರುಣ್ ಡಿ. ಸಿಲ್ವ ಉಪಸ್ಥಿತರಿದ್ದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಹರೀಶ್ ನಂಬಿಯಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಇಂಗ್ಲಿಷ್ ಉಪನ್ಯಾಸಕ ಅರುಣ್ ಕುಮಾರ್ ವಂದಿಸಿದರು.

Exit mobile version