Site icon Suddi Belthangady

ಪುದುವೆಟ್ಟು ಶ್ರೀ.ಧ.ಮಂ.ಅ.ಹಿ.ಪ್ರಾ. ಶಾಲಾ ಪ್ರಾರಂಭೋತ್ಸವ

ಪುದುವೆಟ್ಟು: ಶ್ರೀ.ಧ.ಮಂ.ಅ.ಹಿ.ಪ್ರಾ.ಶಾಲೆಯ 2025-26ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಜೂ.2ರಂದು ಜರಗಿತು. ಊರಿನ ಹಿರಿಯರು, ಪ್ರಗತಿಪರ ಕೃಷಿಕರು, ಸಾಮಾಜಿಕ ಚಿಂತಕರಾದ ಚಿತ್ತರಂಜನ್ ಜೈನ್ ಇವರು ದೀಪ ಬೆಳಗಿಸಿ ಪ್ರಾರಂಭೋತ್ಸವವನ್ನು ನೆರವೇರಿಸಿ ಮಾತನಾಡಿ ವಿದ್ಯಾರ್ಥಿ ಜೀವನದ ಸದುಪಯೋಗದ ಬಗ್ಗೆ ಹಾಗೂ ಶಿಕ್ಷಣದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ನೂತನ ಶೈಕ್ಷಣಿಕ ವರ್ಷಕ್ಕೆ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುದುವೆಟ್ಟು ಗ್ರಾಮ ಪಂಚಾಯತ್ ನ ನಿಕಟಪೂರ್ವ ಅಧ್ಯಕ್ಷ ಯಶವಂತ್ ಗೌಡ ಶಾಲೆಯ ಹಳೆ ವಿದ್ಯಾರ್ಥಿಯಾಗಿ ತನ್ನ ವಿದ್ಯಾರ್ಥಿ ಜೀವನದ ಸವಿ ನೆನಪುಗಳನ್ನು ಮೆಲುಕು ಹಾಕಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಟಿಕ್ಕ ಸಾಹೇಬ್ ಇವರು ಮಾತನಾಡಿ ಶಾಲಾ ಶೈಕ್ಷಣಿಕ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ ಶೀನಪ್ಪ ಗೌಡ 2025 26ನೇ ಶೈಕ್ಷಣಿಕ ವರ್ಷದ ಶೈಕ್ಷಣಿಕ ಚಟುವಟಿಕೆಗಳು ಮತ್ತು ಯೋಜನೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಲಾ ಹಿರಿಯ ಶಿಕ್ಷಕಿ ತೇಜಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಒಂದನೇ ತರಗತಿ ಮತ್ತು ಇತರ ತರಗತಿಗಳಿಗೆ ಹೊಸದಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳಿಗೆ ಆರತಿಯನ್ನು ಬೆಳಗಿ, ಆಟಿಕೆಗಳನ್ನು ವಿತರಿಸಿ ಶಾಲೆಗೆ ಸ್ವಾಗತಿಸಲಾಯಿತು. ಶಾಲಾ ಶಿಕ್ಷಕ ವೃಂದದವರು ಮತ್ತು ಸಿಬ್ಬಂದಿ ವರ್ಗದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಶಿಕ್ಷಕ ಪವನ್ ಕುಮಾರ್ ಸ್ವಾಗತಿಸಿದರು. ನಿಶಾಂತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶೀಲ ಎನ್. ಧನ್ಯವಾದ ಸಮರ್ಪಿಸಿದರು.

Exit mobile version