Site icon Suddi Belthangady

ಮುಂಡಾಜೆಯಲ್ಲಿ ರಿಕ್ಷಾ-ಪಿಕಪ್ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ

ಮುಂಡಾಜೆ: ದಿಡುಪೆ- ಪೈಚಾರು ರಾಜ್ಯ ಹೆದ್ದಾರಿಯ ಮುಂಡಾಜೆ- ಕಲ್ಮಂಜ-ಧರ್ಮಸ್ಥಳ ರಸ್ತೆಯ ಕೆದಿಹಿತ್ಲು ಎಂಬಲ್ಲಿರುವ ಕಿರು ಸೇತುವೆ ಬಳಿ ಮೇ 22ರಂದು ಸಂಜೆ ರಿಕ್ಷಾ ಮತ್ತು ಪಿಕಪ್ ಮಧ್ಯೆ ಡಿಕ್ಕಿ ಸಂಭವಿಸಿದ್ದು ಇಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ರಿಕ್ಷಾ ಚಾಲಕ ಮುಂಡಾಜೆ ಗ್ರಾಮದ ಮೂಲಾರು ನಿವಾಸಿ ಕುಶಾಲಪ್ಪ ದೇವಾಂಗ( 42ವ.) ಅವರ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿಕಪ್ ನಲ್ಲಿದ್ದ ಕೊಕ್ಕಡದ ಡೀಕಯ್ಯ (43ವ.) ಎಂಬವರಿಗೆ ತಲೆ ಹಾಗೂ ಮುಖಕ್ಕೆ ಗಂಭೀರ ಗಾಯಗಳಾಗಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಇಬ್ಬರಿಗೂ ಶಸ್ತ್ರಚಿಕಿತ್ಸೆ ಅಗತ್ನಯವಿರುವುದಾಗಿ ತಿಳಿದು ಬಂದಿದೆ. ಬೆಳ್ತಂಗಡಿ ಸಂಚಾರಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

7 ಕಿಮೀ ವ್ಯಾಪ್ತಿಯ ರಸ್ತೆಯ ಸುಮಾರು 6 ಕಡೆಗಳಲ್ಲಿ ಕಿರು ಸೇತುವೆಗಳಿದ್ದು, ಅವು ಅಗಲ ಕಿರಿದಾದ ಕಾರಣ ಆಗಾಗ ಅಪಘಾತಗಳು ಸಂಭವಿಸುತ್ತಿವೆ. ಕಳೆದ 7 ವರ್ಷಗಳ ಹಿಂದೆ ಈ ರಸ್ತೆ ವಿಸ್ತರಣೆಯಾಗಿದ್ದು, ಈ ಕಿರುಸೇತುವೆಗಳ ಅಭಿವೃದ್ಧಿ ಕಾಮಗಾರಿ ನಡೆದಿರಲಿಲ್ಲ. ಇದರ ಬಳಿಕ ಜನಪ್ರತಿನಿಧಿ, ಇಲಾಖೆಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಶಿಥಿಲ ಕಿರು ಸೇತುವೆಗಳಿರುವ ಈ ರಸ್ತೆಯಲ್ಲಿ ಕಳೆದ ಮಳೆಗಾಲದಲ್ಲಿ ಜಿಲ್ಲಾಧಿಕಾರಿ ಸಂಚಾರ ನಿಷೇಷ ಮಾಡಲು ಸೂಚಿಸಿದ್ದರು. ಆದರೂ ಈ ಅಪಾಯದ ಮಧ್ಯೆ ಇಲ್ಲಿ ವಾಹನ ಸಂಚಾರ ಯಾವುದೇ ಎಗ್ಗಿಲ್ಲದೆ ನಡೆಯುತ್ತಿದ್ದು, ಇಲ್ಲಿನ ಕೆಲವು ಕಿರು ಸೇತುವೆಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು ಯಾವುದೇ ಕ್ಷಣದಲ್ಲಿ ಧರಾಶಾಯಿಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯ ವಿಷ್ಣು ಭಟ್ ತಿಳಿಸಿದ್ದಾರೆ.

Exit mobile version