ಚಾರ್ಮಾಡಿ: ಕಾಡಿನಿಂದ ನಾಡಿಗೆ ಬಂದ ಕಾಡಾನೆ ಜೊತೆ ಸೆಲ್ಫಿ ಫೋಟೋ ತೆಗೆದುಕೊಳ್ಳುವಾಗ ಆನೆಯೂ ಆಕ್ರೋಶಗೊಂಡಿರುವ ಘಟನೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನ ಸವಾರರ ವಿರುದ್ಧ ಕ್ರಮ ಕೈಗೊಳ್ಳಲು ಅರಣ್ಯ ಸಚಿವರು ಖಡಕ್ ಆದೇಶವನ್ನು ನೀಡಿ ಬಿಸಿ ಮುಟ್ಟಿಸುವ ಕೆಲಸ ಮಾಡಲು ಮುಂದಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ 4ನೇ ತಿರುವಿನಲ್ಲಿ ಮೇ.22ರಂದು ಬೆಳಗ್ಗೆ ರಸ್ತೆಗೆ ಬಂದಿದ್ದ ಕಾಡನೆ ಜೊತೆ ವಾಹನ ಸವಾರರು ಸೆಲ್ಫಿ ಫೋಟೋ ತೆಗೆಯುತ್ತಿದ್ದ ಬಗ್ಗೆ ವಿಡಿಯೋ ಮಾಧ್ಯಮಗಳಲ್ಲಿ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ವಾಹನ ನಂಬರ್ ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಮತ್ತು ಅರಣ್ಯದ ಪ್ರವೇಶದ ಬಳಿ ಎಚ್ಚರಿಕೆ ಫಲಕ ಹಾಕಿ ಅರಿವು ಮೂಡಿಸಲು ಸಂಬಂಧ ಸ್ಪಷ್ಟ ಆದೇಶ ಹೊರಡಿಸಲು ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖಸ್ಥರಿಗೆ ಸೂಚನಾ ಪತ್ರ ಮೇ.22ರಂದು ಸಂಜೆ ಹೊರಡಿಸಿದ್ದಾರೆ.