ಬೆಳ್ತಂಗಡಿ: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಬಜ್ಪೆ ಸಮೀಪದ ಕಿನ್ನಿಪದವಿನಲ್ಲಿ ಮೇ.೧ರಂದು ರಾತ್ರಿ ನಡೆದ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾವಳಮೂಡೂರು ಗ್ರಾಮದ ಕಾರಿಂಜಬೈಲು ಸಮೀಪದ ಪುಳಿಮಜಲು ಎಂಬಲ್ಲಿಯ ಸುಹಾಸ್ ಶೆಟ್ಟಿ(೩೧ವ) ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿರುವ ನೌಷಾದ್ ಯಾನೆ ಚೊಟ್ಟೆ ನೌಷಾದ್ (೩೯ವ)ಗೆ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಸೋಮವಾರ ಸಂಜೆ ವಿಚಾರಣಾಧೀನ ಕೈದಿಗಳು ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.
ಸೋಮವಾರ ನೌಷಾದ್‌ನ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದ್ದು ಆತನನ್ನು ಮೈಸೂರು ಜೈಲಿಗೆ ಸ್ಥಳಾಂತರಿಸಲು ಉದ್ದೇಶಿಸಲಾಗಿತ್ತು. ಇದಕ್ಕೂ ಮುನ್ನ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಲು ಆತನನ್ನು ಜೈಲಿನ ಒಳಾಂಗಣದಲ್ಲಿ ಪೊಲೀಸ್ ಭದ್ರತೆ ಜೈಲಿಗೆ ಕರೆ ತರಲಾಗಿತ್ತು. ಈ ಮಧ್ಯೆ ಜೈಲಿನಲ್ಲಿ ಮತ್ತೋರ್ವ ಕೈದಿ ಆತನನ್ನು ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿದ್ದರಿಂದ ಪೊಲೀಸರು ಆತನನ್ನು ಅತ್ತ ಕರೆದೊಯ್ದಿದ್ದರು. ಇದನ್ನು ಕಂಡ ಇತರ ಕೈದಿಗಳು ಆತನನ್ನು ನಮಗೆ ಕೊಡಿ ಎಂದು ಬೊಬ್ಬೆ ಹಾಕಿ ಇದ್ದಕ್ಕಿದ್ದಂತೆ ನೌಷಾದ್ ಮೇಲೆ ಕಲ್ಲು ಮತ್ತು ಸಿಕ್ಕ ಸಿಕ್ಕ ವಸ್ತುಗಳನ್ನು ತೂರಿ ದಾಳಿ ನಡೆಸಿದರು. ಬಳಿಕ ನೌಷಾದ್‌ನನ್ನು ಮೈಸೂರು ಜೈಲಿಗೆ ಸ್ಥಳಾಂತರಿಸಲಾಗಿದೆ.
ಸುಖಾನಂದ ಶೆಟ್ಟಿ ಹತ್ಯೆ ಆರೋಪಿ: ಚೊಟ್ಟೆ ನೌಷಾದ್ ಹಿಂದೂ ಸಂಘಟನೆಗಳ ಮುಖಂಡ ಮೂಲ್ಕಿ ಸುಖಾನಂದ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿಯಾಗಿದ್ದಾನೆ. ಬಜರಂಗದಳದ ಗೋರಕ್ಷಾ ಪ್ರಮುಖರಾಗಿದ್ದ ಸುಹಾಸ್ ಶೆಟ್ಟಿ ಹತ್ಯೆಗೂ ಈತನೇ ಸಂಚು ರೂಪಿಸಿದ್ದ ಎಂದು ತಿಳಿದು ಬಂದಿದೆ. ಜೈಲಿನಲ್ಲಿ ನೌಷಾದ್ ಮೇಲೆ ಇತರ ಕೈದಿಗಳು ಕಲ್ಲು ಎಸೆಯುವ ವೀಡಿಯೋ ತುಣುಕೊಂದು ವೈರಲ್ ಆಗಿದೆ. ಜೈಲಿನ ಬಳಿಯ ಕಟ್ಟಡವೊಂದರ ಮೇಲಿನಿಂದ ಮೊಬೈಲ್ ಫೋನ್‌ನಲ್ಲಿ ಈ ವೀಡಿಯೋ ತೆಗೆಯಲಾಗಿದೆ.
ನಾಲ್ಕು ಮಂದಿ ಕಲ್ಲುಗಳನ್ನು ಎಸೆಯುವ ದೃಶ್ಯ ವೀಡಿಯೋದಲ್ಲಿದೆ. ಘಟನೆಗೆ ಸಂಬಂಧಿಸಿದಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಡೆಯುತ್ತಿದ್ದಂತೆಯೇ ಕೇಂದ್ರ ವಿಭಾಗದ ಎಸಿಪಿ ಪ್ರತಾಪ್ ಸಿಂಗ್ ಥೋರಟ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಬಂಟ್ವಾಳ ತಾಲೂಕಿನ ಫರಂಗಿಪೇಟೆ ನಿವಾಸಿಯಾಗಿರುವ ನೌಷಾದ್ ವಿರುದ್ಧ ಸುಹಾಸ್ ಶೆಟ್ಟಿ ಕೊಲೆಗೆ ಉಳಿದ ಆರೋಪಿಗಳ ಜತೆ ಸಂಚು ರೂಪಿಸಿ ಕೊಲೆ ಕೃತ್ಯದಲ್ಲಿ ಭಾಗಿಯಾದ ಆರೋಪ ಇದೆ. ಈತನ ವಿರುದ್ಧ ಈಗಾಗಲೇ ಸುರತ್ಕಲ್, ಬಜ್ಪೆ, ಮೂಡಬಿದ್ರೆ, ಮಂಗಳೂರು ಉತ್ತರ ಮತ್ತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ, ಕೊಲೆಯತ್ನ, ದರೋಡೆಗೆ ಸಂಚು ಸೇರಿದಂತೆ ಒಟ್ಟು ಆರು ಪ್ರಕರಣಗಳು ದಾಖಲಾಗಿದೆ.