ಬೆಳ್ತಂಗಡಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ಸಮೀಪದ ಹಾನಗಲ್ಲು ಗ್ರಾಮದ ಕಕ್ಕೆಹೊಳೆ ನಿವಾಸಿಯಾಗಿದ್ದು ವೃತ್ತಿಯಲ್ಲಿ ಗುತ್ತಿಗೆದಾರನಾಗಿದ್ದ ಸಂಪತ್ ನಾಯರ್(೪೦ವ) ಅವರನ್ನು ಬರ್ಬರವಾಗಿ ಕೊಲೆ ಮಾಡಿ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಮೃತದೇಹ ಬಿಸಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸಹಿತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರಪೇಟೆ ಸಮೀಪದ ಹಾನಗಲ್ಲು ಗ್ರಾಮದ ಕಿರಣ್ ಬಿ.ಎಂ. (೪೪) ಕಿರಣ್ ಪತ್ನಿ ಸಂಗೀತಾ ಕಿರಣ್ (೩೫) ಹಾಗೂ ಚೌಡ್ಲು ಗ್ರಾಮದ ಪಿ.ಎಂ. ಗಣಪತಿ (೪೩) ಬಂಧಿತರು. ವೈಯಕ್ತಿಕ ದ್ವೇಷದಿಂದ ಕೊಲೆ ಮಾಡುವ ಉzಶದಿಂದ ಸಂಚು ರೂಪಿಸಿ ಈ ಕೊಲೆ ಮಾಡಲಾಗಿದ್ದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಬಂಧಿತ ಆರೋಪಿಗಳ ಪೈಕಿ ಪಿ.ಎಂ. ಗಣಪತಿಯನ್ನು ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಶಕ್ತಿನಗರದಲ್ಲಿರುವ ಬಾಡಿಗೆ ರೂಮ್‌ನಲ್ಲಿ ಅಡಗಿದ್ದ ವೇಳೆ ಬೆಳ್ತಂಗಡಿ ಠಾಣಾ ಪೊಲೀಸರ ಸಹಕಾರದೊಂದಿಗೆ ಕುಶಾಲನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ: ಮೇ.೯ರಂದು ಸಂಪತ್ ನಾಯರ್ ನಾಪತ್ತೆಯಾಗಿದ್ದ ಬಗ್ಗೆ ಕೊಡಗಿನ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಮೇ.೧೦ರಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿ ಮಾಗೇರಿಯ ಸಮೀಪದ ಕಲ್ಲಹಳ್ಳಿ ಗ್ರಾಮದ ಜನವಸತಿ ಪ್ರದೇಶದಲ್ಲಿ ರಕ್ತಸಿಕ್ತವಾದ ಕಾರು ಅನಾಥವಾಗಿ ನಿಂತಿದ್ದ ಬಗ್ಗೆ ಸ್ಥಳೀಯರು ಯಸಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತನಿಖೆ ಮುಂದುವರಿಸಿದಾಗ ಮೇ. ೧೪ರಂದು ಹತ್ತಿರದ ಕಲ್ಲಹಳ್ಳಿ ಪ್ರಪಾತದಲ್ಲಿ ಸಂಪತ್ ಯಾನೆ ಶಂಭು ಅವರ ಶವ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ರೀತಿಯಲ್ಲಿ ಪತ್ತೆಯಾಗಿತ್ತು. ಬೇರೆಡೆ ಕೊಲೆ ಮಾಡಿ ಕಾರಿನಲ್ಲಿ ತಂದು ಮೃತದೇಹ ಎಸೆದಿರುವುದನ್ನು ಪೊಲೀಸರು ತನಿಖೆಯಲ್ಲಿ ಖಚಿತಪಡಿಸಿಕೊಂಡಿದ್ದರು.
ಪತ್ತೆಯಾದ ಕಾರು ಕೊಡಗಿನ ಕುಶಾಲನಗರದ ಉದ್ಯಮಿ ಜಾನ್ ಎಂಬರಿಗೆ ಸೇರಿದ್ದು ಎಂದು ತನಿಖೆಯಲ್ಲಿ ಕಂಡುಕೊಂಡ ಪೊಲೀಸರು ಅವರನ್ನು ವಿಚಾರಣೆ ನಡೆಸಿದಾಗ ತನ್ನ ಸ್ನೇಹಿತ ಸೋಮವಾರಪೇಟೆ ಕಕ್ಕೆಹೊಳೆ ಜಂಕ್ಷನ್ ನಿವಾಸಿ ಸಂಪತ್ ಯಾನೆ ಶಂಭು ಮೇ. ೯ರಂದು ಕಾರನ್ನು ಕೊಂಡೊಯ್ದಿರುವ ಬಗ್ಗೆ ತಿಳಿಸಿದ್ದರು. ನಾಪತ್ತೆ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಮಾರ್ಪಡಿಸಿದ ಕುಶಾಲನಗರ ಠಾಣಾ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಕಿರಣ್ ಎಂಬಾತನನ್ನು ಮೊದಲು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆತನನ್ನು ವಿಚಾರಣೆಗೊಳಪಡಿಸಿದಾಗ ವೈಯುಕ್ತಿಕ ವಿಚಾರದಲ್ಲಿ ಕೊಲೆ ಮಾಡಿರುವುದಾಗಿ ತಿಳಿಸಿದ್ದ. ಅಲ್ಲದೆ ಗಣಪತಿ ಯಾನೆ ಗಣಪ ಎಂಬಾತನ ಕೈವಾಡ ಇರುವ ಬಗ್ಗೆ ಬಂಧಿತ ಕಿರಣ್ ಬಾಯಿಬಿಟ್ಟಿದ್ದ. ಅಲ್ಲದೆ ತನ್ನ ಪತ್ನಿ ಸಂಗೀತಾ ಈ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರುವುದಾಗಿ ತಿಳಿಸಿದ್ದ. ಹತ್ಯೆ ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಗಣಪತಿಯ ಬಂಧನಕ್ಕಾಗಿ ಕುಶಾಲನಗರ ಠಾಣಾ ಪೊಲೀಸರು ವಿವಿಧೆಡೆ ಹುಡುಕಾಟ ನಡೆಸುತ್ತಿದ್ದರು. ಶುಕ್ರವಾರ ರಾತ್ರಿ ಖಚಿತ ಮಾಹಿತಿ ಮೇರೆಗೆ ಕುಶಾಲನಗರ ಠಾಣಾ ಪೊಲೀಸರು ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಶಕ್ತಿನಗರದ ಪಿ.ಜಿ.ಯೊಂದರಲ್ಲಿ ಅಡಗಿದ್ದ ಗಣಪತಿ ಯಾನೆ ಗಣಪನನ್ನು ಬೆಳ್ತಂಗಡಿ ಠಾಣಾ ಪೊಲೀಸರ ಸಹಾಯದಿಂದ ವಶಕ್ಕೆ ಪಡೆದು ಬಂಧಿಸಿದ್ದಾರೆ.
ನಂತರ ಸಂಗೀತಾಳನ್ನು ಪೊಲೀಸರು ಬಂಧಿಸಿದ್ದಾರೆ. ತಾನು ಪಡೆದಿರುವ ಸಾಲವನ್ನು ಮರುಪಾವತಿಸುವುದಾಗಿ ನಂಬಿಸಿ ಸಂಗೀತಾ ಮೇ. ೯ರಂದು ಸಂಪತ್ ಅವರನ್ನು ಸೋಮವಾರಪೇಟೆಯ ಹಾನಗಲ್‌ಗೆ ಬರಮಾಡಿಕೊಂಡಿದ್ದಳು. ಈ ವೇಳೆ ತನ್ನ ಗಂಡ ಕಿರಣ್ ಹಾಗೂ ಸ್ನೇಹಿತ ಗಣಪತಿ ಮೂಲಕ ಸಂಪತ್ ಅವರನ್ನು ಕೋವಿ ಹಿಡಿದು ಬೆದರಿಸಿ ದೊಣ್ಣೆಯಿಂದ ಹೊಡೆದು ಕತ್ತಿಯಿಂದ ಕಡಿದು ಕೊಲೆ ಮಾಡಲಾಗಿದೆ. ಬಳಿಕ ಕೊಲೆಯನ್ನು ಮರೆ ಮಾಚಲು ಮೃತದೇಹವನ್ನು ಸಂಪತ್ ನಾಯರ್ ಬಂದಿದ್ದ ಫಿಯೆಟ್ ಪುಂಟೋ ಕಾರಿನಲ್ಲಿ ಹಾಕಿಕೊಂಡು ಸಕಲೇಶಪುರದಲ್ಲಿ ಬಿಸಾಡಿ ಕಾರನ್ನು ಕಲ್ಲಳ್ಳಿ ಬಳಿ ನಿಲ್ಲಿಸಿ ಈ ಕೃತ್ಯಕ್ಕೆಂದು ಬೆಂಗಳೂರಿನಿಂದ ತಂದಿದ್ದ ಮತ್ತೊಂದು ಕಾರಿನಲ್ಲಿ ಬೆಂಗಳೂರಿಗೆ ತೆರಳಿದ್ದರು ಎಂದು ತನಿಖೆಯಲ್ಲಿ ಗೊತ್ತಾಗಿದೆ. ಬಳಿಕ ಬಂಧಿತ ಮೂವರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪರಸ್ಪರ ಸ್ನೇಹಿತರಾಗಿದ್ದರು-ಸಂಗೀತಾಳ ವೀಡಿಯೋ ಇತ್ತು: ಆರೋಪಿಗಳಾದ ಕಿರಣ್ ಮತ್ತು ಗಣಪತಿ ಹಾಗೂ ಕೊಲೆಯಾದ ಸಂಪತ್ ಪರಸ್ಪರ ಸ್ನೇಹಿತರಾಗಿದ್ದು ಮೂವರೂ ಹಣಕಾಸು ವ್ಯವಹಾರದಲ್ಲಿ ಪಾಲುದಾರರಾಗಿದ್ದರು. ಕಿರಣನ ಪತ್ನಿ ಸಂಗೀತಾಳ ವಿಡಿಯೋ ಒಂದು ಸಂಪತ್ ಬಳಿ ಇದ್ದು ಇದನ್ನು ಇಟ್ಟುಕೊಂಡು ಆತ ಆಗಾಗ ಬ್ಲಾಕ್‌ಮೇಲ್ ಮಾಡುತ್ತಿದ್ದ. ಈ ಹಿಂದೆ ಸಂಗೀತಾ ಕೆಲವು ತಿಂಗಳುಗಳ ಕಾಲ ಸಂಪತ್‌ನೊಂದಿಗೆ ಜೀವನ ನಡೆಸಿದ್ದಳು. ಪುನಃ ತನ್ನ ಮೊದಲ ಪತಿ ಕಿರಣದೊಂದಿಗೆ ಜೀವಿಸುತ್ತಿದ್ದಳು. ಆಕೆ ಸಂಪತ್‌ನಿಂದ ಪಡೆದುಕೊಂಡಿದ್ದ ೨೦ ಲಕ್ಷ ರೂಪಾಯಿಯನ್ನು ವಾಪಸ್ ನೀಡದಿದ್ದಾಗ ಸಂಪತ್ ವೀಡಿಯೋ ವಿಚಾರದಲ್ಲಿ ಬ್ಲಾಕ್‌ಮೇಲ್ ಮಾಡುತ್ತಿದ್ದ. ಇದರಿಂದ ಕುಪಿತರಾದ ಕಿರಣ್ ಹಾಗೂ ಸಂಗೀತಾ ಆಕೆಯ ಸಂಬಂಧಿ ಗಣಪತಿಯೊಂದಿಗೆ ಸೇರಿ ಸ್ಕೆಚ್ ಹಾಕಿ ಸಂಪತ್‌ನನ್ನು ಬರಮಾಡಿಕೊಂಡು ಕೊಲೆ ಕೃತ್ಯ ಎಸಗಿದ್ದಾರೆ ಎಂದು ತನಿಖೆಯಲ್ಲಿ ಗೊತ್ತಾಗಿದೆ. ಕೃತ್ಯಕ್ಕೆ ಬಳಸಿದ ಕೋವಿ, ಕತ್ತಿ ಮತ್ತು ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್, ಸೋಮವಾರಪೇಟೆ ಡಿವೈಎಸ್‌ಪಿ ಚಂದ್ರಶೇಖರ್ ಅವರ ಮಾರ್ಗದರ್ಶನದಂತೆ ಸೋಮವಾರಪೇಟೆ, ಮಡಿಕೇರಿ, ವಿರಾಜಪೇಟೆ ಪೊಲೀಸ್ ಉಪವಿಭಾಗಗಳ ಅಧಿಕಾರಿಗಳು, ಸಿಬ್ಬಂದಿಗಳು, ಅಪರಾಧ ಪತ್ತೆದಳ ಮತ್ತು ತಾಂತ್ರಿಕ ಘಟಕದ ಸಿಬ್ಬಂದಿಗಳು ತನಿಖೆ ನಡೆಸುತ್ತಿದ್ದಾರೆ.
ಸಿದ್ದರಾಮಯ್ಯರ ಕಾರಿಗೆ ಮೊಟ್ಟೆ ಎಸೆದಿದ್ದ ಸಂಪತ್!: ಗುತ್ತಿಗೆದಾರನಾಗಿದ್ದ ಸಂಪತ್ ನಾಯರ್ ಸ್ಥಿತಿವಂತನಾಗಿದ್ದು ಕೆಲವೊಂದು ಕೆಟ್ಟ ಚಾಳಿಗೆ ಒಳಗಾಗಿ ತನ್ನ ಸ್ನೇಹಿತರಿಂದಲೇ ಕೊಲೆಯಾಗಿದ್ದಾನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯ ವಿರೋಧಪಕ್ಷದ ನಾಯಕನಾಗಿದ್ದ ವೇಳೆ ಕೊಡಗಿಗೆ ಭೇಟಿ ನೀಡಿದ್ದಾಗ ಸಂಪತ್ ನಾಯರ್ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣದಲ್ಲಿ ಆರೋಪಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.