ಉಜಿರೆ: ಮಾಜಿ ಸೈನಿಕರ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ದೇಶದ ಪ್ರತಿಷ್ಟಿತ ಆಸ್ಪತ್ರೆಯಲ್ಲಿ ಮಾತ್ರ ದೊರಕುವಂತಹ ಮಾಜಿ ಸೈನಿಕರ ನಗದು ರಹಿತ ಚಿಕಿತ್ಸಾ ಯೋಜನೆಯ (ECHS) ವ್ಯವಸ್ಥೆಗೆ ಬೆನಕ ಆಸ್ಪತ್ರೆ ಸೇರಿಕೊಂಡಿದ್ದು ಅದರ ಉದ್ಘಾಟನೆ ಹಾಗೂ ಸನ್ಮಾನ ಕಾರ್ಯಕ್ರಮವು ಮೇ.22ರಂದು ಬೆನಕ ಆಸ್ಪತ್ರೆಯ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಕರ್ನಲ್ ನಿತಿನ್ ಭಿಡೆ ನೆರವೇರಿಸಿದರು. ಬೆನಕ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಗೋಪಾಲಕೃಷ್ಣ ಭಟ್ ಪ್ರಾಸ್ತವಿಕವಾಗಿ ಮಾತನಾಡಿ, ಪ್ರತಿಯೊಬ್ಬರ ಕೊಡುಗೆಯೂ ಆಸ್ಪತ್ರೆಯ ಬೆಳವಣಿಗೆಗೆ ಸಹಕಾರಿಯಾಗಿದೆ. ದೇಶ ಕಾಯುವ ಯೋಧನ ಹಾಗೆಯೇ ದೇಹ ಕಾಯುವ ವೈದ್ಯರ ಸೇವೆಯು ಸಮಾಜಕ್ಕೆ ಅಮೂಲ್ಯವಾಗಿದೆ ಎಂದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ನಿತಿನ್ ಭಿಡೆ, ವೈದ್ಯಕೀಯ ಆರೈಕೆಯ ಅಗತ್ಯ ಇರುವ ರೋಗಿಗಳಿಗೆ ಸರಿಯಾದ ರೀತಿಯ ಸೇವೆ ನೀಡಿದರೆ ಮಾತ್ರ ಆಸ್ಪತ್ರೆಯು ಜನಾನುರಾಗಿಯಾಗಿರುತ್ತದೆ ಎಂಬುದಕ್ಕೆ ಬೆನಕ ಆಸ್ಪತ್ರೆ ಸಾಕ್ಷಿಯಾಗಿದೆ. ವೈದ್ಯರು ರೋಗಿಗಳ ಅವಶ್ಯಕತೆ ಬಗ್ಗೆ ಹಾಗೂ ರೋಗಿಗಳು ವೈದ್ಯರ ಕಾಳಜಿ ಬಗ್ಗೆ ಸರಿಯಾಗಿ ಅರ್ಥಮಾಡಿಕೊಂಡು ಸೇವೆ ನೀಡುವ ಅನಿವಾರ್ಯತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಕರ್ನಲ್ ನಿತಿನ್ ಭಿಡೆ, ರಫಿ, ವಾಯುಸೇನೆಯ ನಿವೃತ್ತ ಜೆ ಪಿ ಮ್ ಚೆರಿಯನ್ ಹಾಗೂ ಬೆಳ್ತಂಗಡಿ ತಾಲೂಕು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಮೊಹಮ್ಮದ್ ರಫಿರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕು ಮಾಜಿ ಸೈನಿಕರ ಸಂಘದ ಗೌರವಧ್ಯಕ್ಷರು ಮೇಜರ್ ಜನರಲ್ ಎಮ್ ವಿ ಭಟ್, ಕಾರ್ಯದರ್ಶಿ ಉಮೇಶ್ ಬಂಗೇರ, ಸೀತಾರಾಮ್ ಭಟ್, ಡಾ. ಭಾರತಿ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಬೆನಕ ಆಸ್ಪತ್ರೆಯ ಪಿಆರ್ಒ ಎಸ್ ಜಿ ಭಟ್ ಕಾರ್ಯಕ್ರಮ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.