Site icon Suddi Belthangady

ಮುಂಡಾಜೆ: ನಿದ್ರೆ ಮಾತ್ರೆ ಸೇವಿಸಿದ್ದ ತಾಯಿ ಮೃತ್ಯು-ಮಗ ಗಂಭೀರ: ಬದುಕಿಸುವ ಪ್ರಯತ್ನ ಮಾಡಬೇಡಿ ಎಂಬ ೪ ಪುಟಗಳ ಪತ್ರ ಪತ್ತೆ

ಬೆಳ್ತಂಗಡಿ: ಆರ್ಥಿಕ ಸಮಸ್ಯೆ ಮತ್ತು ಅನಾರೋಗ್ಯದ ಕಾರಣದಿಂದ ಅತಿಯಾಗಿ ನಿದ್ರೆ ಮಾತ್ರೆ ಸೇವಿಸಿದ್ದ ವೃದ್ಧ ತಾಯಿ ಸಾವಿಗೀಡಾಗಿ ಪುತ್ರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ನಡೆದಿದೆ. ಮುಂಡಾಜೆ ಗ್ರಾಮದ ಕೂಳೂರು ದಿ. ಕುಂಞರಾಮನ್ ನಾಯರ್ ಅವರ ಪತ್ನಿ ಕಲ್ಯಾಣಿ (೯೬ವ) ಮೃತರಾದವರು. ಅವರ ಪುತ್ರ, ಖ್ಯಾತ ಜನಪದ ಕಲಾವಿದ, ಶಿಕ್ಷಕ ಜಯರಾಂ ಕೆ. (೫೮ವ ) ಅವರು ಗಂಭೀರಾವಸ್ಥೆಯಲ್ಲಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಲ್ಯಾಣಿ ಮತ್ತು ಜಯರಾಂ ಅವರ ಕೂಳೂರಿನ ಮನೆಯಲ್ಲಿ ಯಾವುದೇ ಚಟುವಟಿಕೆ ಇಲ್ಲದಿರುವುದನ್ನು ಗಮನಿಸಿ ನೆರೆ ಹೊರೆಯವರು ಬಂದು ನೋಡಿದಾಗ ತಾಯಿ ಮತ್ತು ಮಗ ಮನೆಯೊಳಗೆ ದೇವರ ಕೋಣೆಯ ಎದುರು ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಊರವರು ಸೇರಿ ಮನೆಯ ಬಾಗಿಲು ತೆಗೆದು ಒಳ ಪ್ರವೇಶಿಸಿದಾಗ ಇಬ್ಬರೂ ಉಸಿರಾಡುತ್ತಿರುವುದು ಕಂಡು ಬಂದಿತ್ತು. ತತ್‌ಕ್ಷಣ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ತೀವ್ರ ನಿಗಾಘಟಕದಲ್ಲಿದ್ದ ತಾಯಿ ಕಲ್ಯಾಣಿ ಅವರು ಮೇ. ೧೨ರಂದು ಸಂಜೆ ಕೊನೆಯುಸಿರೆಳೆದರು. ಮಗ ಜಯರಾಂ ಅವರ ಆರೋಗ್ಯ ಸ್ಥಿತಿ ಇನ್ನಷ್ಟು ವಿಷಮಿಸಿದ್ದರಿಂದ ಅವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

೪ ಪುಟಗಳ ಪತ್ರ ಪತ್ತೆ: ಜಯರಾಂ ಅವರು ಬರೆದಿರುವ ನಾಲ್ಕು ಪುಟಗಳ ಪತ್ರ ಲಭಿಸಿದ್ದು ಅದರಲ್ಲಿ ಅನಾರೋಗ್ಯ ಮತ್ತು ಆರ್ಥಿಕ ಕಾರಣದಿಂದ ನಾವು ನಿದ್ರೆ ಮಾತ್ರೆ ಸೇವಿಸಿರುತ್ತೇವೆ. ನಮ್ಮನ್ನು ಬದುಕಿಸುವ ಪ್ರಯತ್ನ ಮಾಡಬೇಡಿ ಎಂದು ಬರೆಯಲಾಗಿದೆ. ತಾಯಿ ಕಳೆದ ನಾಲ್ಕು ವರ್ಷಗಳಿಂದ ವಯೋ ಸಹಜ ಅನಾರೋಗ್ಯದಿಂದ ಮಲಗಿದಲ್ಲೇ ಇದ್ದು ಅವರ ಆರೈಕೆಯನ್ನು ಮಾಡುತ್ತಿzನೆ. ಆದ್ದರಿಂದ ನಾನು ಸತ್ತರೆ ಅಮ್ಮನನ್ನು ನೋಡಿಕೊಳ್ಳುವವರು ಯಾರು ಎಂಬ ಕಾರಣಕ್ಕೆ ನಾವಿಬ್ಬರೂ ಜತೆಯಾಗಿ ಸಾಯುತ್ತಿದ್ದೇವೆ ಎಂದು ಬರೆದಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ತಾಯಿಗೆ ಮೊದಲು ಮಾತ್ರ ನೀಡಿ ಬಳಿಕ ಪುತ್ರ ಮಾತ್ರೆ ಸೇವಿಸಿದರೇ ಅಥವಾ ಇಬ್ಬರೂ ಜತೆಗೆ ಮಾತ್ರೆ ಸೇವಿಸಿದ್ದಾರೆಯೇ ಎಂಬುದು ಗೊತ್ತಾಗಿಲ್ಲ. ಜಯರಾಂ ಅವರು ಕಲಾವಿದರಾಗಿ, ನಾಟಕ ರಚನೆಕಾರರಾಗಿ, ಜಾನಪದ ಕಲಾರಾಧಕರಾಗಿ, ಚಿತ್ರಕಲಾ ಶಿಕ್ಷಕರಾಗಿ ರಾಜ್ಯ ಮಟ್ಟದ ಹಲವು ಪ್ರಶಸ್ತಿ ಪಡೆದುಕೊಂಡಿದ್ದರು. ಸಂಪನ್ಮೂಲ ವ್ಯಕ್ತಿಯಾಗಿಯೂ ಇದ್ದ ಅವರು ೨೬ ವರ್ಷಗಳಿಂದ ಮುಂಡಾಜೆಯಲ್ಲಿ ಕಲಾಕುಂಚ ಆರ್ಟ್ಸ್ ಎಂಬ ಟ್ಯೂಶನ್ ಸೆಂಟರ್ ನಡೆಸುತ್ತಿದ್ದರು.
ಮೃತ ಕಲ್ಯಾಣಿ ಅವರ ನಾಲ್ವರು ಗಂಡು ಮಕ್ಕಳ ಪೈಕಿ ಶ್ರೀಧರ ನಾಯಕ್ ಮತ್ತು ರಾಜು ನಾಯಕ್ ಅವರು ಈಗಾಗಲೇ ಮೃತಪಟ್ಟಿದ್ದಾರೆ. ಇದೀಗ ಅವರು ಹಿರಿಯ ಪುತ್ರ ಶಶಿಧರ ನಾಯಕ್ ಹಾಗೂ ಕಿರಿಯ ಪುತ್ರ ಜಯರಾಂ ನಾಯಕ್ ಅವರನ್ನು ಅಗಲಿದ್ದಾರೆ.

Exit mobile version