Site icon Suddi Belthangady

ಮೂರನೇ ಅಂತರಾಷ್ಟ್ರೀಯ ಯೋಗ ಮತ್ತು ನ್ಯಾಚುರೋಪತಿ ಸಮ್ಮೇಳನ-2025

ಉಜಿರೆ: ಎಸ್‌ಡಿಎಂ ನ್ಯಾಚುರೋಪತಿ ಮತ್ತು ಯೋಗಿಕ್‌ ಸೈನ್ಸ್‌ ಕಾಲೇಜಿನಲ್ಲಿ ಮೂರನೇ ಅಂತಾರಾಷ್ಟ್ರೀಯ ಯೋಗ ಮತ್ತು ನ್ಯಾಚುರೋಪತಿ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಿತು. ಈ ಸಮ್ಮೇಳನವು ಐದು ದಿನಗಳ ಕಾಲ ನಡೆಯಲಿದ್ದು, ಮೇ. 16ರಂದು ಮುಕ್ತಾಯಗೊಳ್ಳಲಿದೆ. ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಉಪನ್ಯಾಸಕರು ಪಾಳ್ಗೊಳ್ಳಲಿದ್ದಾರೆ. ಮೊದಲ ದಿನದ ಅಂಗವಾಗಿ ಸಮ್ಮೇಳನದ ಉದ್ಘಾಟನೆ ಹಾಗೂ ಯೋಗ ಮತ್ತು ನ್ಯಾಚುರೋಪತಿ ಕುರಿತಾದ ಹಲವು ಪುಸ್ತಕಗಳು ಬಿಡುಗಡೆಗೊಂಡವು.

ನಮ್ಮಲ್ಲೀಗ ಮೂರು ಯೋಗ ಮತ್ತು ನ್ಯಾಚುರೋಪತಿ ಆಸ್ಪತ್ರೆಗಳಿವೆ. ಆ ಮೂರೂ ಕಾಲೇಜುಗಳೂ ದೇಹವು ತಾನಾಗಿಯೇ ಗುಣಗೊಳ್ಳುತ್ತದೆ ಮತ್ತು ತಾನಾಗಿಯೇ ಭೂಮಿಗೆ ಸೇರುತ್ತದೆ (Body heals itself and returns to nature) ಎನ್ನುವ ಧ್ಯೇಯವನ್ನು ಇಟ್ಟುಕೊಂಡಿದೆ. ನಮ್ಮ ವಿದ್ಯಾರ್ಥಿಗಳು ಜಗತ್ತಿನಾದ್ಯಂತ ಇದ್ದಾರೆ. ಹಾಗೂ ಜನರನ್ನು ಯೋಗ ಮತ್ತು ನ್ಯಾಚುರೋಪತಿಯ ಮೂಲಕ ಗುಣಪಡಿಸುತ್ತಿದ್ದಾರೆ ಎಂದು ಧರ್ಮಸ್ಥಳದ ಧರ್ಮಾದಿಕಾರಿ ಹಾಗೂ ಎಸ್‌.ಡಿ.ಎಂ.ಸಿ ಸೊಸೈಟಿ ಅಧ್ಯಕ್ಷ ಡಾ.ಡಿ ವೀರೇಂದ್ರ ಹೆಗ್ಗಡೆ ಹೇಳಿದರು. ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ ಮುಂದುವರೆಯುತ್ತಿದೆ. ಜನರಿಗೆ ಆರೋಗ್ಯ ಸಮಸ್ಯೆಯಾದರೆ ವೈದ್ಯರ ಬಳಿ ಹೋಗಿ, ನಾವು ಹಣವನ್ನು ನೀಡುತ್ತೇವೆ, ನಮಗೆ ಆರೋಗ್ಯವನ್ನು ನೀಡಿ ಎಂದು ಕೇಳುತ್ತಿದ್ದಾರೆ. ಆದರೆ ನಮ್ಮ ನ್ಯಾಚುರೋಪತಿ ಮತ್ತು ಆಯುರ್ವೇದ ಕಾಲೇಜಿನಲ್ಲಿ ದೇಹವು ತಾನಾಗಿಯೇ ಗುಣಮುಖವಾಗುತ್ತದೆ ಎಂದು ಹೇಳಿ ಕೊಡುತ್ತೇವೆ ಎಂದರು.

ಎಸ್‌.ವಿ.ವೈ.ಎ.ಎಸ್‌.ಎ ಕುಲಪತಿ ಡಾ. ಎಸ್‌. ನಾಗೇಂದ್ರರವರಿಗೆ ಡಿ.ವೀರೇಂದ್ರ ಹೆಗ್ಗಡೆಯವರಿಂದ ಜೀವಮಾನ ಸಾಧನೆ ಸನ್ಮಾನ ನಡೆಸಲಾಯಿತು.

ಎಸ್‌.ವಿ.ವೈ.ಎ.ಎಸ್‌.ಎ(S-VYASA) ಯುನಿವೆರ್ಸಿಟಿಯ ಕುಲಪತಿ ಹೆಚ್‌. ಆರ್‌. ನಾಗೇಂದ್ರ ಮಾತನಾಡಿ, ಇಂದಿನ ಜಗತ್ತು ಹಲವು ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದೆ. ಆದರೆ ಅವೆಲ್ಲವೂ ಕೇವಲ ಆಧುನಿಕ ವೈದ್ಯಕೀಯ ಚಿಕಿತ್ಸೆಯಿಂದ ಗುಣವಾಗುವುದಿಲ್ಲ. ಆಧುನಿಕ ಚಿಕಿತ್ಸೆಗಳ ಕೊಡುಗೆ ಜಗತ್ತಿಗೆ ಉತ್ತಮ ಕೊಡುಗೆಯನ್ನು ನೀಡುತ್ತಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಅವೆಲ್ಲವುಗಳ ಮಧ್ಯೆ ನಮ್ಮ ಆಯುರ್ವೇದ ಮತ್ತು ನ್ಯಾಚುರೋಪತಿಯ ಕೊಡುಗೆಗಳನ್ನು ನಾವು ಮರೆಯುವಂತಿಲ್ಲ. ಡಬ್ಲು.ಹೆಚ್‌.ಒ(WHO) 2020ರಲ್ಲಿಯೇ ಎಲ್ಲಾ ಕಾಯಿಲೆಗಳನ್ನೂ ಮಾಯವಾಗಿಸುವುದಾಗಿ ಹೇಳಿತ್ತು ಆದರೆ ಅದು ಸಾಧ್ಯವಾಗಿಲ್ಲ ಎಂದರು.

ಕಂಪೋಡಿಯಂ ಆಫ್‌ ಡಿಫೆರಂಟ್‌ ಡಿಸೀಸಸ್‌ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಮಂಗಳೂರು ಲೋಕಸಭಾ ಸದಸ್ಯ ಬ್ರಿಜೇಶ್‌ ಚೌಟ, ನಮ್ಮ ಜಿಲ್ಲೆಯಲ್ಲಿಯೂ ಡೆಡಿಕೇಟೆಡ್‌ ಟ್ರೆಡಿಷನಲ್ ಮೆಡಿಸಿನ್ ಸೆಂಟರ್‌ ತರುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಆದರೆ ಎಸ್‌.ಡಿ.ಎಂ ಇದಾಗಲೇ ಯೋಗ ಮತ್ತು ನ್ಯಾಚುರೋಪತಿ ಕಾಲೇಜನ್ನು ಸ್ಥಾಪಿಸಿಯಾಗಿದೆ ಎಂದು ಎಸ್‌.ಡಿ.ಎಂ ಶಿಕ್ಷಣ ಸಂಸ್ಥೆಗಳನ್ನು ಶ್ಲಾಘಿಸಿದರು.

ಡಿಕ್ಟೆಟರಿ ಆಫ್‌ ನ್ಯಾಚುರೋಪತಿ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಐಎನ್‌ವೈಜಿಎಂಎ ಬೆಂಗಳೂರಿನ ರಾಷ್ಟ್ರೀಯ ಅಧ್ಯಕ್ಷ ಡಾ. ನವೀನ್‌ ಕೆ.ವಿ. ಹಲವರು ನ್ಯಾಚುರೋಪತಿಯನ್ನು ಅನುಮಾನಿಸುತ್ತಾರೆ. ಆದರೆ ಇಷ್ಟು ವರ್ಷಗಳ ನನ್ನ ಅನುಭವದ ಪ್ರಕಾರ ನ್ಯಾಚುರೋಪತಿ ಮೂಲಕ ರೋಗ ಗುಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.

ಎಸ್‌.ವಿ.ವೈ.ಎ.ಎಸ್‌.ಎ ಉಪಕುಲಪತಿ ಡಾ.ಎನ್‌. ಕೆ. ಮಂಜುನಾಥ್‌ ಮಾತನಾಡಿ, ನಮ್ಮ ಭಾರತೀಯ ಸನಾತನ ಆಯುರ್ವೇದ ಮತ್ತು ನ್ಯಾಚುರೋಪತಿ ಪದ್ಧತಿಗಳು ಬೇರೆ ಬೇರೆ ದೇಶಗಳಲ್ಲಿ ಇಂದು ಪ್ರಸಿದ್ಧಿಯನ್ನು ಪಡೆಯುತ್ತಿದೆ. ಅದರಲ್ಲಿ ಎಸ್‌.ಡಿ.ಎಂ ಯೋಗ ಮತ್ತು ನ್ಯಾಚುರೋಪತಿ ಕಾಲೇಜಿನ ಕೊಡುಗೆಯೂ ಮಹತ್ವದ್ದು ಎಂದು ಹೇಳುತ್ತಾ, ಡಾ ವೀರೇಂದ್ರ ಹೆಗ್ಗಡೆಯವರನ್ನು ಆಧುನಿಕ ನ್ಯಾಚುರೋಪತಿಯ ನ್ಯಾಚುರೋಪತಿ ಪಿತಾಮಹ ಎಂದು ಹೇಳಬಹುದು ಎಂದರು.

ಕಾರ್ಯಕ್ರಮದಲ್ಲಿ ಎನ್.ಐ.ಎನ್.ವೈ (NINY) ಕೊಚ್ಚಿಯ ನಿರ್ದೇಶಕ ಡಾ.ಬಾಬು ಜೋಸೆಫ್‌, ಎಸ್‌.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಹರ್ಷೇಂದ್ರ ಕುಮಾರ್‌, ಡಾ. ಸತೀಶ್‌ಚಂದ್ರ, ಎಸ್‌.ಡಿಎಂ ನ್ಯಾಚುರೋಪತಿ ಮತ್ತು ಯೋಗಿಕ್‌ ಸೈನ್ಸ್‌ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Exit mobile version