ಕೊಕ್ಕಡ: ಸಂತ ಜೋನರ ದೇವಾಲಯ ಕೌಕ್ರಾಡಿ, ಕೊಕ್ಕಡದಲ್ಲಿ ಮೇ. 11ರಂದು ಮಂಗಳೂರು ಬಿಷಪ್ ರವರ ಕರೆಯಂತೆ ಹೊಸ ಪೋಪ್ ಲಿಯೋ XIV ರವರ ಆಯ್ಕೆಗೆ ಕೃತಜ್ಞತೆ ಹಾಗೂ ನೆರೆ ರಾಷ್ಟ್ರಗಳ ನಡುವೆ ಶಾಂತಿಗಾಗಿ ವಿಶೇಷ ಪ್ರಾರ್ಥನೆಯನ್ನು ನೆರವೇರಿಸಲಾಯಿತು. ಪ್ರಧಾನ ಗುರುಗಳಾಗಿ ನವ ಗುರು ಫಾ. ಮರ್ವಿನ್ ಪ್ರವೀಣ್ ಲೋಬೊ, ಫಾ. ಅನಿಲ್ ಪ್ರಕಾಶ್ ಡಿಸಿಲ್ವಾ ಮತ್ತು ಫಾ. ಅಶೋಕ್ ಡಿಸೋಜರವರು ಈ ಪವಿತ್ರ ಬಲಿಪೂಜೆಯನ್ನು ಅರ್ಪಿಸಿದರು.
ಬಲಿ ಪೂಜೆ ಬಳಿಕ, 6 ತಿಂಗಳು ಸೇವಾದರ್ಶಿ ಸೇವೆಯನ್ನು ಈ ದೇವಾಲಯದಲ್ಲಿ ಸಲ್ಲಿಸಿ, ಎ. 30ರಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾರವರಿಂದ ಗುರುದೀಕ್ಷೆ ಪಡೆದ ನವ ಗುರು ಫಾ. ಮರ್ವಿನ್ ಪ್ರವೀಣ್ ಲೋಬೊರವರನ್ನು ಶುಭ ಹಾರೈಸುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ನವ ಗುರುಗಳನ್ನು ಸನ್ಮಾನಿಸಿ, ತಮ್ಮ ಮುಂದಿನ ಸೇವೆಗೆ ಶುಭಹಾರೈಸಲಾಯಿತು. ಇದೇ ವೇದಿಕೆಯಲ್ಲಿ ಎಸ್. ಎಸ್. ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಚರ್ಚ್ ನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಚರ್ಚ್ ಧರ್ಮಗುರುಗಳಾದ ಫಾ. ಅನಿಲ್ ಪ್ರಕಾಶ್ ಡಿಸಿಲ್ವಾ, ಫಾ. ಅಶೋಕ್ ಡಿಸೋಜ, ಚರ್ಚ್ ಉಪಾಧ್ಯಕ್ಷ ನೋಯೆಲ್ ಪ್ರವೀಣ್ ಮೊಂತೇರೊ, ಕಾರ್ಯದರ್ಶಿ ವೀಣಾ ಮಸ್ಕರೇನ್ಹಸ್, 21 ಆಯೋಗಗಳ ಸಂಯೋಜಕಿ ವಿನ್ನಿಪ್ರೆಡ್ ಡಿಸೋಜ ಮತ್ತು ಮಂಗಳೂರು ಧರ್ಮಪ್ರಾಂತ್ಯದ ಸಮಿತಿ ಸದಸ್ಯ ವಿನ್ಸೆಂಟ್ ಮಿನೇಜಸ್ ರವರು ಉಪಸ್ಥಿತರಿದ್ದರು.