Site icon Suddi Belthangady

ಉಜಿರೆ ಪ್ರಾ.ಕೃ.ಪ.ಸಹಕಾರ ಸಂಘದ ಅಧ್ಯಕ್ಷರಾಗಿ ಬಾಲಕೃಷ್ಣ ಗೌಡ ಕೇರಿಮಾರ್, ಉಪಾಧ್ಯಕ್ಷರಾಗಿ ಶ್ರೀಧರ ಪೂಜಾರಿ ಆಯ್ಕೆ

ಬೆಳ್ತಂಗಡಿ: ಉಜಿರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಬಾಲಕೃಷ್ಣ ಗೌಡ ಕೇರಿಮಾರ್ ಮತ್ತು ಉಪಾಧ್ಯಕ್ಷರಾಗಿ ಶ್ರೀಧರ್ ಪೂಜಾರಿ ಯಾನೆ ಸದಾಶಿವ ಪೂಜಾರಿ ಆಯ್ಕೆಯಾಗಿದ್ದಾರೆ.

ಸಂಘದ 12 ಸ್ಥಾನಗಳಿಗೆ ಡಿ.27ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 10 ಮಂದಿ ಮತ್ತು ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳು 2 ಸ್ಥಾನಗಳಲ್ಲಿ ಜಯಗಳಿಸಿದ್ದರು. ಆ ಸಂದರ್ಭದಲ್ಲಿ ಹೈಕೋರ್ಟ್ ಆದೇಶದಂತೆ ಚುನಾವಣಾಧಿಕಾರಿಗಳು ಫಲಿತಾಂಶ ಘೋಷಣೆ ಮಾಡದೆ ತಡೆ ಹಿಡಿದಿದ್ದರು. ಇದೀಗ ಹೈಕೋರ್ಟ್ ಅನುಮತಿಯಂತೆ ಫಲಿತಾಂಶ ಘೋಷಣೆ ಮಾಡಲಾಗಿದ್ದು ಮೇ. 7ರಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿಯಾಗಿದ್ದ ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಬಿ.ನಡೆಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸರಸ್ವತಿ ಸಿ. ಶೆಟ್ಟಿ ಮತ್ತು ಸಿಬ್ಬಂದಿಗಳು ಸಹಕರಿಸಿದರು. ಅಧ್ಯಕ್ಷರಾಗಿ ಕೇರಿಮಾರು ಬಾಲಕೃಷ್ಣ ಗೌಡ ಮತ್ತು ಉಪಾಧ್ಯಕ್ಷರಾಗಿ ಸದಾಶಿವ ಯಾನೆ ಶ್ರೀಧರ ಪೂಜಾರಿ ಅವಿರೋಧವಾಗಿ ಆಯ್ಕೆಯಾದರು. ಇವರೀರ್ವರೂ ಕಾಂಗ್ರೆಸ್ ಬೆಂಬಲಿತರಾಗಿದ್ದಾರೆ.

ಸಂಘದ ಚುನಾವಣೆಯಲ್ಲಿ ನಿರ್ದೇಶಕರುಗಳಾಗಿ ಕಾಂಗ್ರೆಸ್ ಬೆಂಬಲಿತರಾದ ಬಾಲಕೃಷ್ಣ ಕೇರಿಮಾರ್, ಶ್ರೀಧರ ಪೂಜಾರಿ, ಅನಿಲ್ ಪ್ರಕಾಶ್ ಡಿಸೋಜ, ರಜತ ಗೌಡ, ಗುರುರಾಜ ಗೌಡ ಅಂತರ, ವಾರಿಜ ಎಸ್.ಗೌಡ, ಸಾಧು ಎಮ್., ಅಣ್ಣು ನಾಕ, ಅರುಣ ಕುಮಾರ್ ಬನಸಿರಿ, ಬಾಲಕೃಷ್ಣ ಗೌಡ, ಸಹಕಾರ ಭಾರತಿಯಿಂದ ಅರವಿಂದ ಕಾರಂತ್ ಕೆ. ಮತ್ತು ಪುಷ್ಪಾವತಿ ಆರ್. ಶೆಟ್ಟಿ ಆಯ್ಕೆಯಾಗಿದ್ದರು. ಈ ಪೈಕಿ ಕಾಂಗ್ರೆಸ್ ಪ್ರಮುಖರು ಒಮ್ಮತದಿಂದ ಅಧ್ಯಕ್ಷ ಸ್ಥಾನಕ್ಕೆ ಬಾಲಕೃಷ್ಣ ಗೌಡ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಧರ ಪೂಜಾರಿ ಅವರನ್ನು ಆಯ್ಕೆ ಮಾಡಿದ್ದರು.

Exit mobile version