Site icon Suddi Belthangady

ಮೊಗ್ರು: ಸ.ಕಿ.ಪ್ರಾ. ಶಾಲೆಯಲ್ಲಿ ಬೇಸಿಗೆ ಶಿಬಿರ – ಮಕ್ಕಳ ಶಿಕ್ಷಣವನ್ನು ಹೆತ್ತವರು ಗಮನ ಹರಿಸಿ: ಮೋಹನ್ ಕುಮಾರ್

ಮೊಗ್ರು: ಮಕ್ಕಳ ಶಿಕ್ಷಣದಲ್ಲಿ ಶಾಲೆ ಮತ್ತು ಶಿಕ್ಷಕರ ಪಾತ್ರಗಳಂತೆಯೇ ಹೆತ್ತವರ ಪಾತ್ರ ಬಹಳ ಮುಖ್ಯ. ಆ ದೃಷ್ಟಿಯಿಂದ ಹೆತ್ತವರು ನಿತ್ಯ ಮಕ್ಕಳೊಂದಿಗೆ ಶಿಕ್ಷಣದ ಕುರಿತು ಸಂವಾದ ಮಾಡಬೇಕು ಎಂದು ಕನಸಿನ ಮನೆ. ಲಕ್ಷ್ಮಿ ಇಂಡಸ್ಟ್ರಿಸ್ ಮಾಲಕ ಸರಕಾರಿ ಶಾಲಾ ಅಭಿವೃದ್ಧಿಯ ಹರಿಕಾರ ಮೋಹನ್ ಕುಮಾರ್ ಅಭಿಪ್ರಾಯಪಟ್ಟರು. ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ ಮೊಗ್ರು ಇದರ ನೇತೃತ್ವದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೊಗ್ರು ಇಲ್ಲಿ ನಡೆದ ರಜಾ-ಮಜಾ ಬೇಸಿಗೆ ಶಿಬಿರ-2025ರ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡುತ್ತಾ ಅನಿವಾರ್ಯ ಕಾರಣದಿಂದ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗದಿದ್ದರೂ ಮಾಡುವ ವೃತ್ತಿಯಲ್ಲಿ ಪ್ರೀತಿ ಇರಿಸಿ ಉತ್ತಮ ಸಂಪಾದನೆ ಸಾಧ್ಯವಾಗಿದೆ. ಸಂಪಾದನೆಯ ಒಂದು ಭಾಗವನ್ನು ಈ ಶಿಕ್ಷಣದ ಕಾರ್ಯಕ್ಕೆ ನೀಡುತ್ತಿದ್ದೇನೆ ಎಂದರು.

ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ ಮೊಗ್ರು ಇದರ ಸ್ಥಾಪಕ ಅಧ್ಯಕ್ಷ ಯೋಗಗುರು ಕುಶಾಲಪ್ಪ ಗೌಡ ಮಾತನಾಡಿ, ನಮ್ಮ ಹಿರಿಯರ ಶ್ರಮದಿಂದ ಗ್ರಾಮದಲ್ಲಿ ಶಾಲೆ ಪ್ರಾರಂಭವಾಗಿದ್ದು, ಸರಕಾರಿ ಶಾಲೆ ಮುಚ್ಚುವ ಹಂತಕ್ಕೆ ಬಂದಿರುವುದು. ಆಂಗ್ಲ ಭಾಷೆಯ ಶಿಕ್ಷಣದ ವ್ಯಾಮೋಹದಿಂದ ಅಂತಹ ಆಂಗ್ಲ ಭಾಷೆಯ ಶಿಕ್ಷಣ ಪ್ರಾಥಮಿಕ ಹಂತದಲ್ಲಿ ಸಿಕ್ಕಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮುಂದಿನ ದಿನದಲ್ಲಿ ವಿಜ್ಞಾನಿಯೋ, ವೈದ್ಯರೋ, ಇಂಜಿನಿಯರ್ ಉನ್ನತ ಅಧಿಕಾರಿಗಳಾಗಿ ಜಾಗತಿಕ ಮಟ್ಟಕ್ಕೆ ತಲುಪಲು ಬುನಾದಿಯಾಗುತ್ತದೆ. ಟ್ರಸ್ಟ್‌ನ ನೇತೃತ್ವದಲ್ಲಿ ಮೊಗ್ರು ಶಾಲೆಯಲ್ಲಿ 1ನೇ ತರಗತಿಯಿಂದಲೇ ಇಂಗ್ಲೀಷ್ ಬರವಣಿಗೆ ಹಾಗೂ ಮಾತುಗಾರಿಕೆಯ ತರಬೇತಿಯೊಂದಿಗೆ ಗುಣಮಟ್ಟ ಶಿಕ್ಷಣಕ್ಕೆ ಬೇಕಾದ ಶಿಕ್ಷಕರನ್ನು ಹಾಗೂ ಮೂಲ ಸೌಕರ್ಯವನ್ನು ಟ್ರಸ್ಟ್ ಒದಗಿಸಲಿದೆ ಎಂದರು.

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೊಗ್ರು ಮುಖ್ಯೋಪದ್ಯಾಯ ಮಾದವ ಗೌಡ ಮಾತನಾಡುತ್ತಾ ಸರಕಾರವು ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕ, ಊಟ, ಹಾಲು, ಮೊಟ್ಟೆ, ಚಿಕ್ಕಿ, ವೈದ್ಯಕೀಯ ಹಾಗೂ ಪ್ರವಾಸ ಸೌಲಭ್ಯ ಒದಗಿಸುತ್ತಿದ್ದು, ಈಗ ಟ್ರಸ್ಟ್ ಶಿಕ್ಷಕರ ಕೊರತೆಯನ್ನು ನೀಗಿಸಿದೆ. ಅದೇ ರೀತಿ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕ್ರೀಡೆ ಹಾಗೂ ಯೋಗ ಶಿಕ್ಷಣವನ್ನು ಒದಗಿಸಲು ಕಾರ್ಯೊನ್ಮುಖರಾಗಿರುವುದು ಒಳ್ಳೆಯ ಬೆಳವಣಿಗೆ. ಇದರ ಸದುಪಯೋಗ ಗ್ರಾಮಸ್ಥರು ಹಾಗೂ ವಿದ್ಯಾಸಕ್ತರು ಪಡೆಯಬಹುದು ಎಂದರು.

ಕಾರ್ಯಕ್ರಮದಲ್ಲಿ ಬಂದಾರು ಪಂಚಾಯತ್‌ನ ಉಪಾಧ್ಯಕ್ಷ ಗಂಗಾಧರ ಪೂಜಾರಿ, ಸದಸ್ಯ ಬಾಲಕೃಷ್ಣ ಗೌಡ ಮುಗೇರಡ್ಕ, ಮುಗೇರಡ್ಕ ದೈವಸ್ಥಾನದ ಮುಕ್ತಸರ ರಾಮಣ್ಣ ಗೌಡ ದೇವಸ್ಯ, ಪದ್ಮುಂಜ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕಿ ಶೀಲಾವತಿ ಬಾಬು ಗೌಡ, ಭಜನಾ ಮಂದಿರದ ಅಧ್ಯಕ್ಷ ಸದಾಶಿವ, ಟ್ರಸ್ಟ್‌ನ ಕಾರ್ಯದರ್ಶಿ ಧನಂಜಯ ಪಿಲಿಂಡೇಲು, ಕೋಶಾಧಿಕಾರಿ ಮನೋಹರ ಅಂತರ, ಪುರಂದರ ನ್ಯಾಮಾರು ಉಪಸ್ಥಿತರಿದ್ದರು. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೊಗ್ರು ಇದರ ಎಸ್.ಡಿ.ಎಮ್.ಸಿ ಅಧ್ಯಕ್ಷರಾಗಿ ನಾಲ್ಕು ವರ್ಷ ಸೇವೆ ಮಾಡಿದ ಶೀನಪ್ಪ ಗೌಡ ನೆಕ್ಕರಜೆ ಇವರನ್ನು ಸನ್ಮಾನಿಸಲಾಯಿತು.

ಶಾಲೆಗೆ 1 ಲಕ್ಷ ಮೌಲ್ಯದ ಡೆಸ್ಟ್, ಬೆಂಚು ಹಾಗೂ ನೆಲಕ್ಕೆ ಟೈಲ್ಸ್ ಕೊಡುಗೆಯ ಘೋಷಣೆ : ಟ್ರಸ್ಟ್‌ನ ಕೆಲಸವನ್ನು ಪ್ರಶಂಶಿಸಿ ಶಾಲೆಗೆ ನೆರವಾಗಲು ಮೋಹನ್ ಕುಮಾ‌ರ್ ಇವರಿಂದ 1 ಲಕ್ಷ ಮೌಲ್ಯದ ಡೆಸ್ಕ್ ಮತ್ತು ಬೆಂಚು ಹಾಗೂ ನೆಲಕ್ಕೆ ಟೈಲ್ಸ್ ಹಾಕಿ ಕೊಡುವ ನಿರ್ಧಾರವನ್ನು ಪ್ರಕಟಿಸಿದರು. ಶಿಬಿರಾರ್ಥಿಗಳಿಗೆ ಕಂಪಸ್ ಬಾಕ್ಸ್ ಹಾಗೂ ಬಣ್ಣದ ಪೆನ್ನಿನ ಬಾಕ್ಸ್ ಶಿಬಿರದಲ್ಲಿ ಭಾಗವಹಿಸಿದ 185 ಮಂದಿ ಶಿಬಿರಾರ್ಥಿಗಳಿಗೆ ಹಂಚಿದರು. ಶಿಬಿರಾರ್ಥಿಗಳಿಗೆ ಟ್ರಸ್ಟ್‌ನ ವತಿಯಿಂದ ತಲಾ ರೂ.200 ಮೌಲ್ಯದ ಕಿಟ್‌ ನ್ನು ನೀಡಲಾಯಿತು.

Exit mobile version