ಮೇಲಂತಬೆಟ್ಟು: ಗ್ರಾಮ ಪಂಚಾಯತ್ ಹಾಗೂ ಅರಿವು ಕೇಂದ್ರ ಮತ್ತು ಡಿಜಿಟಲ್ ಗ್ರಂಥಾಲಯ ಇದರ ವತಿಯಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲಾ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಮೇ. 5ರಂದು ಪೂರ್ವಾಹ್ನ 10:30ಕ್ಕೆ ಸರಿಯಾಗಿ ಮೇಲಂತಬೆಟ್ಟು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾರವರು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಹೇಮಾವತಿ ವಲಯ ತರಬೇತುದಾರರು ಜೆಸಿಐ ಇಂಡಿಯಾ ಇವರು ಮಕ್ಕಳಿಗೆ ವಿವಿಧ ಚಟುವಟಿಕೆಯನ್ನು ನೀಡುವುದರ ಮೂಲಕ ಬೇಸಿಗೆ ಶಿಬಿರವನ್ನು ಯಶಸ್ವಿಯಾಗಿ ನಡೆಸಿದರು.
ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಲೋಕನಾಥ ಶೆಟ್ಟಿ ಮತ್ತು ಸದಸ್ಯರಾದ ಸುಮಲತಾ, ಚಂದ್ರರಾಜ ಎಂ., ದೀಪಿಕಾ ಹಾಗೂ ಗ್ರಂಥಪಾಲಕಿ ಚಂದ್ರಾವತಿಯವರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಪ್ರಭಾರ ಅಭಿವೃದ್ಧಿ ಅಧಿಕಾರಿ ನಿರ್ಮಲ್ ಕುಮಾರ್ ರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಗಣೇಶ್ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು. ಈ ಬೇಸಿಗೆ ಶಿಬಿರದ ಆರಂಭದ ದಿನದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲಾ ಮಕ್ಕಳು ವಿವಿಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು.