Site icon Suddi Belthangady

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ : ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ವಿ.ಪ. ಸದಸ್ಯ ಪ್ರತಾಪ್ ಸಿಂಹ ನಾಯಕ್ ಆಗ್ರಹ

ಬೆಳ್ತಂಗಡಿ: ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಅವರ ಬರ್ಬರ ಹತ್ಯೆ ನಡೆದಿದೆ. ಇದು ಪೂರ್ವನಿಯೋಜಿತ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಕಾಶ್ಮೀರದಲ್ಲಿ ಹಿಂದೂಗಳ ಮಾರಣಹೋಮ ಆಗಿದೆ. ಇದನ್ನು ದೇಶ- ರಾಜ್ಯದ ಜನರು ಮರೆತಿಲ್ಲ. ಇದರ ನಡುವೆ ಹಿಂದೂ ಕಾರ್ಯಕರ್ತನ ಬರ್ಬರ ಹತ್ಯೆ ನಡೆದಿರುವುದನ್ನು ವಿಧಾನಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಖಂಡಿಸಿದ್ದಾರೆ.

ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರದ ಎಸ್‍.ಡಿ.ಪಿ.ಐ., ಪಿ.ಎಫ್‍.ಐ. ಮೇಲಿನ ಸಡಿಲ ನೀತಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆಗೆ ಕಾರಣವಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ಮತೀಯ ಸಮಾಜಘಾತುಕ ಶಕ್ತಿಗಳಿಗೆ ದುಷ್ಟರಿಗೆ ಬಲ ಬಂದಂತಾಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದ್ರೋಹಿಗಳು, ಕೊಲೆಗಡುಕರಿಗೆ ಏನು ಮಾಡಿದರೂ ನಡೆಯುತ್ತದೆ ಎಂಬ ಆತ್ಮವಿಶ್ವಾಸ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಪದೇಪದೇ ಇಂಥ ಕೃತ್ಯ ನಡೆಯುತ್ತಿದೆ. ಹಿಂದೂ ಕಾರ್ಯಕರ್ತರ ಹತ್ಯೆ, ಹಿಂದೂ ಸಂಘಟನೆಗಳನ್ನು ಬೆದರಿಸುವ ಕೆಲಸ ನಡೆದಿದೆ.

ಕರ್ನಾಟಕ ರಾಜ್ಯದಲ್ಲಿ ಗೃಹ ಸಚಿವರು ಏನು ಮಾಡುತ್ತಿದ್ದಾರೆ? ಗುಪ್ತಚರ ಇಲಾಖೆ ಸತ್ತು ಹೋಗಿದೆಯೇ? ರಾಜ್ಯದ ಕಾನೂನು- ಸುವ್ಯವಸ್ಥೆ ಏನಾಗಿದೆ? ಒಬ್ಬ ಹಿಂದೂ ಕಾರ್ಯಕರ್ತನ ಜೀವಕ್ಕೆ ಬೆದರಿಕೆ ಇದೆ ಎಂದು ಗೊತ್ತಿದ್ದರೂ ಯಾಕೆ ಇಂಥ ಘಟನೆ ಆಗಲು ಸಾಧ್ಯವಾಯಿತು? ಮುಖ್ಯಮಂತ್ರಿಗಳು ಮತಾಂಧ ಶಕ್ತಿ ಗಳ ಬಗ್ಗೆ ತೋರುವ ಮೃದು ಧೋರಣೆಯು ಸುಹಾಸ್ ಕೊಲೆಗೂ ಕಾರಣ.

ಹಿಂದೂ ವಿರೋಧಿ ರಾಜ್ಯ ಸರಕಾರ ತೊಲಗುವವರೆಗೆ ರಾಜ್ಯದ ಜನರಿಗೆ ನೆಮ್ಮದಿ ಇರಲಾರದು. ಕಳೆದ ಕೆಲ ತಿಂಗಳುಗಳಿಂದ ಮುಖ್ಯಮಂತ್ರಿಗಳ ಹೇಳಿಕೆಯು ದೇಶದ್ರೋಹಿಗಳಿಗೆ ಶಕ್ತಿ ಕೊಡುವಂತಿದೆ. ಗೃಹಸಚಿವರ ನಿಷ್ಕ್ರಿಯತೆಯಿಂದ ಕರ್ನಾಟಕದಲ್ಲಿ ಇದ್ದೇವಾ ಅಥವಾ ಪಾಕಿಸ್ತಾನದಲ್ಲಿ ಇದ್ದೇವಾ ಎಂಬ ಚರ್ಚೆಗೆ ಕಾರಣವಾಗಿದೆ. ಪಾಕಿಸ್ತಾನದ ಯುದ್ಧ ಬೇಡ ಅಂತ ತನ್ನ ವ್ಯಾಪ್ತಿಯನ್ನು ಮೀರಿ ಪುಕ್ಕಟೆ ಸಲಹೆ ಕೊಡುವ ಸಿದ್ದರಾಮಯ್ಯನವರು ಇಂತಹ ಹೀನಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ. ಪೋಲಿಸ್ ಇಲಾಖೆ ಕೂಡಲೇ ಕೊಲೆಗಡುಕರನ್ನು ಬಂಧಿಸಬೇಕು ಎಂದು ವಿಧಾನಪರಿಷತ್ ಶಾಸಕರು ಕೆ ಪ್ರತಾಪಸಿಂಹ ನಾಯಕ್ ಆಗ್ರಹಿಸಿದ್ದಾರೆ

Exit mobile version