ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಜಂಕ್ಷನ್ ನಲ್ಲಿ ಕೊಳಚೆ ನೀರು ರಸ್ತೆಯಲ್ಲಿ ಹರಿದು ಜನ ಸಂಚಾರಕ್ಕೆ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಹಲವು ದಿನಗಳಿಂದ ಈ ರೀತಿ ಕೊಳಚೆ ನೀರು ರಸ್ತೆಯಲ್ಲಿಯೇ ನಿಲ್ಲುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಇಲ್ಲಿನ ಜನರಿದ್ದು, ಸ್ಥಳೀಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮೌಖಿಕ ದೂರು ನೀಡಿದರೂ ಕೂಡ ಪರಿಸ್ಥಿತಿಯಲ್ಲಿ ಬದಲಾವಣೆಯಾಗಿಲ್ಲ ಎಂದು ಸ್ಥಳಿಯರು ಸುದ್ದಿ ಬಿಡುಗಡೆಗೆ ಪತ್ರಿಕೆಗೆ ದೂರನ್ನಿತ್ತಿದ್ದಾರೆ.
ಸ್ಥಳೀಯ ಲಾಡ್ಜ್ ವೊಂದರರಿಂದ ರಸ್ತೆಗೆ ಕೊಳಚೆ ನೀರು ಹರಿಯುತ್ತಿದ್ದು, ಯಾವುದೇ ರೀತಿಯ ಕ್ರಮವನ್ನು ಸಂಬಂಧಿಸಿದ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ತೆಗೆದುಕೊಳ್ಳುತ್ತಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ. ಧರ್ಮಸ್ಥಳ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ಕೊಕ್ಕಡ ಜಂಕ್ಷನ್ ಜನನಿಬಿಡ ಪ್ರದೇಶವಾಗಿದ್ದು, ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಈ ರಸ್ತೆಯ ಮೂಲಕ ಪ್ರಯಾಣಿಸುತ್ತಿದ್ದಾರೆ. ಕೊಕ್ಕಡವು ಹೋಬಳಿ ಕೇಂದ್ರವಾಗಿದ್ದು ನಾನಾ ಊರಿನ ಜನರು ಇಲಾಖೆಯ ಕಾರ್ಯ ನಿಮಿತ್ತ ಕೊಕ್ಕಡವನ್ನು ಸಂಪರ್ಕಿಸಬೇಕಾಗಿದೆ. ಆದರೆ ಬಸ್ಸು, ಜೀಪನ್ನು ಅವಲಂಬಿಸಿ ಬಂದ ಜನರು ಕೊಕ್ಕಡ ಜಂಕ್ಷನ್ ನಲ್ಲಿಯೇ ಇಳಿಯಬೇಕಾಗಿದ್ದು, ಇಳಿದು ನಡೆದುಕೊಂಡು ಹೋಗಬೇಕಾದ ರಸ್ತೆಯೇ ಕೊಳಚೆಮಯವಾಗಿದೆ. ಸಂಬಂಧಪಟ್ಟವರು ಈ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಮೇಲಾಧಿಕಾರಿಗಳಿಗೆ ದೂರ ನೀಡುವ ಬಗ್ಗೆ ಸಾರ್ವಜನಿಕರು ಚರ್ಚಿಸುತ್ತಿದ್ದಾರೆ.