ಬೆಳ್ತಂಗಡಿ: 2004ರಲ್ಲಿ ಪ್ರಾರಂಭಗೊಂಡ ವಾಣಿ ಪದವಿ ಪೂರ್ವ ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾಗಿ 21 ವರ್ಷಗಳಲ್ಲಿ ಕಾಲೇಜನ್ನು ಶೈಕ್ಷಣಿಕವಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಲ್ಲಿ ಇವರ ಶ್ರಮ ಅಮೋಘವಾದದ್ದು.
ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ್ ರೇಂಜರ್ಸ್, ರೆಡ್ ಕ್ರಾಸ್ ಹಾಗೂ ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರ, ಪ್ರಾಯೋಗಿಕ ಪರೀಕ್ಷಾ ಕೇಂದ್ರ, ಸಿ.ಇ.ಟಿ ಪರೀಕ್ಷಾ ಕೇಂದ್ರ, ಮೊರಾರ್ಜಿ ದೇಸಾಯಿ ಪರೀಕ್ಷಾ ಕೇಂದ್ರವಾಗಿ ಪ್ರಾರಂಭಿಸಲು ಇವರ ಶ್ರಮ ಅಪಾರ.
ದಕ್ಷಿಣಕನ್ನಡ ಜಿಲ್ಲಾ ಪ್ರಾಂಶುಪಾಲ ಸಂಘದ ತಾಲೂಕು ಪ್ರತಿನಿಧಿಯಾಗಿ ಜಿಲ್ಲಾ ಸಂಘದ ಉಪಾಧ್ಯಕ್ಷರಾಗಿ, ಪರೀಕ್ಷಾ ಕಮಿಟಿಯ ಸದಸ್ಯರಾಗಿ ಪದವಿ ಪೂರ್ವ ಕಾಲೇಜಿನ ಉದ್ಯೋಗಿಗಳ ಸಹಕಾರಿ ಸಂಘದ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸಿದ ಯದುಪತಿ ಗೌಡರು ಬೆಳ್ತಂಗಡಿ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ‘ಗಡಿನಾಡ ಕನ್ನಡ ಸೇವಾರತ್ನ’ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
1990ರಿಂದ ಎಂ. ಜಿ. ಎಂ ಕಾಲೇಜು ಉಡುಪಿಯಲ್ಲಿ ಸೇವೆಯನ್ನು ಆರಂಭಿಸಿ 1992ರಿಂದ 2004 ಮೇ ವರೆಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿ, ಜೂ. 2004ರಲ್ಲಿ ವಾಣಿ ಪದವಿಪೂರ್ವ ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾಗಿ ನಿಯುಕ್ತಿಗೊಂಡು, ಶೈಕ್ಷಣಿಕ ಕ್ಷೇತ್ರದಲ್ಲಿ 35 ವರ್ಷಗಳ ಸಾರ್ಥಕ ಸೇವೆಯನ್ನು ಸಲ್ಲಿಸಿ ಸೇವಾ ನಿವೃತ್ತಿಯನ್ನು 2025 ಏ. 30ರಂದು ಹೊಂದಲಿದ್ದಾರೆ.
ಇವರ ಸೇವೆಯನ್ನು ವಾಣಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಅಪಾರವಾಗಿ ಮೆಚ್ಚಿಕೊಂಡಿದ್ದು ಅನೇಕ ಭಾರಿ ಸಂಸ್ಥೆಯ ಸಮಾರಂಭಗಳಲ್ಲಿ ಇವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುತ್ತಾರೆ.
ವಿದ್ಯಾರ್ಥಿ ಗಳ ಜೊತೆಗೂ ಬಹಳ ಆತ್ಮೀಯತೆಯಿಂದ ಮಾತನಾಡುವುದು ಇವರ ವಿಶೇಷತೆ ವಿದ್ಯಾರ್ಥಿಗಳಿಗೂ ಅಚ್ಚುಮೆಚ್ಚಿನವರಾಗಿದ್ದರು.