ಉಜಿರೆ: ಕ್ಯಾಥೋಲಿಕ್ ಜಗದ್ಗುರು ಶಾಂತಿ ದೂತ ಪೋಪ್ ಫ್ರಾನ್ಸಿಸ್ ಅವರ ನಿಧನಕ್ಕೆ ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘ ಉಜಿರೆ ಕೇಂದ್ರ ಕಚೇರಿಯಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು. ಪೋಪರ ಬಗ್ಗೆ ಸಂತಾಪ ವ್ಯಕ್ತಪಡಿಸಿ ಮಾತನಾಡಿದ ಸಂಘದ ಅಧ್ಯಕ್ಷ ವಲೇರಿಯನ್ ರೊಡ್ರಿಗಸ್ ನಮ್ಮನ್ನಗಲಿದ ಪೋಪರು ಕೇವಲ ಕ್ಯಾಥೋಲಿಕ್ ಸಮುದಾಯವನ್ನು ಪ್ರೀತಿಸದೆ ಸರ್ವಧರ್ಮದ ಜನರನ್ನು ಪ್ರೀತಿಸಿದರು. ಪ್ರಪಂಚದ ನಾನಾ ದೇಶಗಳನ್ನು ಸುತ್ತಾಡಿ ಬಡವರ ದೀನದಲಿತರ ಏಳಿಗೆಗೆ ಶ್ರಮಿಸುವಂತೆ ವಿಶ್ವ ಸಮುದಾಯಕ್ಕೆ ಕರೆ ನೀಡುತ್ತಿದ್ದರು ಎಂದು ಹೇಳಿ ಪೋಪರ ಆತ್ಮಕ್ಕೆ ಶಾಂತಿ ಕೋರಿದರು.
ಅವರು ಕಾಶ್ಮೀರದಲ್ಲಿ ಹುತಾತ್ಮರಾದ ನತದೃಷ್ಟರಿಗೆ ಶ್ರದ್ದಾಂಜಲಿ ಸಲ್ಲಿಸಿದರಲ್ಲದೆ ಇಂತಹ ಭೀಕರ ಪಾಪಕೃತ್ಯ ನಡೆಸಿದ ಭಯೋತ್ಪಾದಕರಿಗೆ ತಕ್ಕ ಶಿಕ್ಷೆಯನ್ನು ನೀಡಬೇಕೆಂದು ಹೇಳಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಲ್ಸನ್ ನೆಲ್ಸನ್ ಮೋನಿಸ್ ಪೋಪರ ಕಿರು ಪರಿಚಯವನ್ನು ನೀಡಿದರು. ಮತ್ತು ಕಾರ್ಯಕ್ರಮ ನಿರ್ವಹಿಸಿದರು. ಸಂಘದ ನಿರ್ದೇಶಕರು ಮತ್ತು ಸಿಬಂಧಿ ಪ್ರಾರ್ಥನಾ ಗೀತೆ ಹಾಡಿದರು. ಎಲ್ಲರೂ ಪೋಪರ ಭಾವಚಿತ್ರಕ್ಕೆ ಪುಷ್ಪವೃಷ್ಟಿಗೈದರು. ಸಂಘದ ಕಚೇರಿಯಲ್ಲಿ ಪೋಪರ ಭಾವಚಿತ್ರವನ್ನು ಪ್ರತಿಷ್ಠಾಪಿಸಲಾಯ್ತು.