Site icon Suddi Belthangady

ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ವತಿಯಿಂದ ಬೃಹತ್‌ ಪಂಜಿನ ಮೆರವಣಿಗೆ – ಪ್ರತಿಭಟನೆ

ಉಜಿರೆ: ಜಮ್ಮು- ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿ ಹಿಂದೂಗಳನ್ನು ಗುರಿಯಾಗಿ ಭಯೋತ್ಪಾದಕರು ನಡೆಸಿದ ಹೇಯ ಕೃತ್ಯವನ್ನು ಖಂಡಿಸಿ ಮತ್ತು ದಾಳಿ ಮಾಡಿದ ಭಯೋತ್ಪಾದಕ ಸಂಘಟನೆಯನ್ನು ಬೇರು ಸಹಿತ ಕಿತ್ತು ಹಾಕಲು ಭಾರತೀಯ ಸೇನೆಗೆ ಸಂಪೂರ್ಣ ಅಧಿಕಾರ ನೀಡಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ವತಿಯಿಂದ ಎ.24ರಂದು ರಾತ್ರಿ ಉಜಿರೆ ಸರ್ಕಲ್ ನಲ್ಲಿ ಬೃಹತ್ ಪಂಜಿನ ಮೆರವಣಿಗೆ, ಶ್ರದ್ಧಾಂಜಲಿ ಮತ್ತು ಪ್ರತಿಭಟನೆ ನಡೆಯಿತು.

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿ, ಪಾಕಿಸ್ತಾನ ಎಂಬ ಪಾಪಿ ದೇಶ ಭಯೋತ್ಪಾದಕರನ್ನು ಹುಟ್ಟು ಹಾಕಿಸಿ ಅದೆಷ್ಟೋ ಸನಾತನ ಹಿಂದೂಗಳ ರಕ್ತವನ್ನು ಹರಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಇಲ್ಲಿಯವರೆಗೆ ಅದೆಷ್ಟೋ ಸಾವಿರ ಹಿಂದುಗಳ ಮಾರಣಹೋಮ ಆಗಿದೆ. ಭಾರತ ದೇಶದ ಸೈನಿಕರಿಗೆ ಅವಕಾಶವನ್ನು ಕೊಡಿ. ಒಂದೇ ಒಂದು ಗಂಟೆಯಲ್ಲಿ ಪಾಕಿಸ್ತಾನವನ್ನು ಭೂಪಟದಲ್ಲಿ ಇಲ್ಲದಂತೆ ಮಾಡಿ ಬಿಡುತ್ತಾರೆ ಎಂದು ಕಾಶ್ಮೀರದ ಕೃತ್ಯವನ್ನು ಖಂಡಿಸಿದರು.

ನಿವೃತ್ತ ಯೋಧ ಕರುಣಾಕರ ಶೆಟ್ಟಿ ಗೋಳಿತೊಟ್ಟು ಮಾತನಾಡಿ, ಭಯೋತ್ಪಾದನೆಗೆ ಬೆಂಬಲ ನೀಡುವಂತಹ ದೇಶವನ್ನೇ ನಿರ್ನಾಮ ಮಾಡಿದರೆ ಮಾತ್ರ ಭಯೋತ್ಪಾದನೇ ಅಂತ್ಯ ಕಾಣಲು ಸಾಧ್ಯ. ಈ ಸಂದರ್ಭದಲ್ಲಿ ಎಲ್ಲಾ ರಾಜಕೀಯ, ಧರ್ಮ ಬದಿಗಿಟ್ಟು ಕೇಂದ್ರ ಸರ್ಕಾರದ ಬಲಿಷ್ಠ ನಾಯಕ ನರೇಂದ್ರ ಮೋದಿಯವರಿಗೆ ಭಯೋತ್ಪಾದನೆಯನ್ನು ಹಾಗೂ ಸಂಪೂರ್ಣ ಪಾಕಿಸ್ತಾನವನ್ನೇ ನಿರ್ನಾಮ ಮಾಡಲು ಎಲ್ಲಾ ಪಕ್ಷಗಳು, ನಾಯಕರುಗಳು ಬೆಂಬಲ ನೀಡಬೇಕು. ಪ್ರಧಾನಿ ನರೇಂದ್ರ ಮೋದಿಯವರು ತಕ್ಕ ರೀತಿಯ ಪ್ರತಿಕಾರವನ್ನು ನೀಡುತ್ತಾರೆ ಎಂಬ ನಂಬಿಕೆ ನಮಗೆಲ್ಲರಿಗೂ ಇದೆ ಎಂದು ಸಾವಿಗೀಡಾದವರಿಗೆ ಸಂತಾಪ ಸೂಚಿಸಿದರು.

ಭಯೋತ್ಪಾದಕರ ದಾಳಿಯಿಂದಾಗಿ ಅಗಲಿದವರ ಆತ್ಮಕ್ಕೆ ಶಾಂತಿ ದೊರೆಯಲೆಂದು ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಗೌರವಾಧ್ಯಕ್ಷ ಹರೀಶ್ ಕುಮಾರ್ ಬರಮೇಲು, ಅಧ್ಯಕ್ಷ ಅನೀಲ್ ಕುಮಾರ್ ಅಂತರ, ಸಂಚಾಲಕ ಮನೋಜ್ ಕುಂಜರ್ಪ ಹಾಗೂ ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.

Exit mobile version