Site icon Suddi Belthangady

ಅನುಗ್ರಹ ಕಾಲೇಜಿನಲ್ಲಿ ನಡೆದ ಕಳ್ಳತನ ಪ್ರಕರಣ: ಆರೋಪಿಗಳನ್ನು ಕಸ್ಟಡಿಗೆ ಪಡೆದ ಪೊಲೀಸರು – ಸ್ಥಳ ಮಹಜರು-ಸಿಸಿಟಿವಿಯ ಹಾರ್ಡ್‌ ಡಿಸ್ಕ್‌ಗಾಗಿ ಬೆಳ್ತಂಗಡಿ ನದಿಯಲ್ಲಿ ಮುಳುಗುತಜ್ಞರಿಂದ ಶೋಧ

ಬೆಳ್ತಂಗಡಿ: ಉಜಿರೆಯ ಅನುಗ್ರಹ ಪಿಯು ಕಾಲೇಜಿನಲ್ಲಿ ಮಾ.4ರಂದು ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉಡುಪಿಯಲ್ಲಿ ಸೆರೆಸಿಕ್ಕಿರುವ ಈರ್ವರನ್ನು ಎ.15ರಂದು ಬೆಳ್ತಂಗಡಿ ಪೊಲೀಸ್ ಠಾಣಾ ಎಸ್.ಐ. ಯಲ್ಲಪ್ಪ ಅವರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದಾರೆ. ಕಳವು ಕೃತ್ಯ ನಡೆದ ಅನುಗ್ರಹ ಪಿಯು ಕಾಲೇಜಿಗೆ ಬಂಧಿತರನ್ನು ಕರೆತಂದು ಮಹಜರು ನಡೆಸಲಾಯಿತು.

ಮಾರ್ಚ್ 20ರಂದು ಕಾರ್ಕಳದ ನಿಟ್ಟೆಯ ಈ ಸಂತ ಲಾರೆನ್ಸ್ ಪ್ರೌಢಶಾಲೆ ಸಮೀಪ ಕಾರ್ಕಳ ಠಾಣಾ ಪೊಲೀಸರು ಉಡುಪಿಯಲ್ಲಿ ನಡೆದ ಕಳವು ಕೃತ್ಯಕ್ಕೆ ಸಂಬಂಧಿಸಿ ಬೈಂದೂರಿನ ಅರ್ಷಿತ್ ವಿನಾಶ್ ದೋಡ್ರೆ ಮತ್ತು ಈ ಮಂಗಳೂರಿನ ರಿಜ್ವಾನ್ ಯಾನೆ ರಿಲ್ಕಾನ್ ದು ಎಂಬವರನ್ನು ಬಂಧಿಸಿದ್ದರು. ಅರ್ಷಿತ್ ಅವಿನಾಶ್ ದೋಡ್ರೆ ಹಾಗೂ ರಿಜ್ವಾನ್ ಯಾನೆ ರಿಲ್ವಾನ್ ಉಜಿರೆಯ ಅನುಗ್ರಹ ಕಾಲೇಜ್ ನಲ್ಲಿ ನಡೆದ ಕಳ್ಳತನದಲ್ಲೂ ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ವಿಚಾರಣೆ ವೇಳೆ ಮಾಹಿತಿ ಸಿಕ್ಕಿತು. ಮಾ.೦೪ ರಂದು ಉಜಿರೆಯ ಅನುಗ್ರಹ ಕಾಲೇಜಿನಲ್ಲಿ ಕಳ್ಳತನ ನಡೆಸಿದ್ದ ಇಬ್ಬರು ಬೈಕ್‌ನಲ್ಲಿ ಬಂದು ಒಬ್ಬ ಒಳನುಗ್ಗಿರುವ ಬಗ್ಗೆ ಮಾಹಿತಿ ದೊರಕಿತ್ತು. ಅಲ್ಲದೆ ಕಳ್ಳರು ತಮ್ಮ ಚಲವಲನ ಗೊತ್ತಾಗಬಾರದೆಂದು ಸಿಸಿಟಿವಿಯ ಹಾರ್ಡ್ ಡಿಸ್ಕ್ ಎಗರಿಸಿದ್ದರು.
ಆದರೆ ಮತ್ತೊಂದು ಬಾಕ್ಸ್‌ನಲ್ಲಿದ್ದ ಹಾರ್ಡ್ ಡಿಸ್ಕ್ ಬಿಟ್ಟು ಹೋದ ಹಿನ್ನಲೆಯಲ್ಲಿ ಚಲನವಲನ, ಕುಣಿಯುತ್ತಾ ಸಾಗುತ್ತಿದ್ದ ದೃಶ್ಯಗಳು ಲಭ್ಯವಾಗಿತ್ತು. ಈ ಹಿನ್ನಲೆಯಲ್ಲಿ ಕಾರ್ಕಳ ಠಾಣಾ ಪೊಲೀಸರಿಂದ ಬಂಧಿತರಾಗಿದ್ದ ಈರ್ವರನ್ನು ವಶಕ್ಕೆ ಪಡೆದು ಬೆಳ್ತಂಗಡಿ ಠಾಣಾ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಅನುಗ್ರಹ ಕಾಲೇಜಿನಲ್ಲಿ ಮಹಜರು-ಮುಳುಗು ತಜ್ಞರಿಂದ ಶೋಧ: ಏ.೧೫ರಂದು ಉಜಿರೆಯ ಅನುಗ್ರಹ ಪಿಯು ಕಾಲೇಜಿನಲ್ಲಿ ಆರೋಪಿಗಳಿಬ್ಬರನ್ನು ಕರೆತಂದು ಮಹಜರು ನಡೆಸಲಾಯಿತು. ಈ ವೇಳೆ ಕಳ್ಳತನ ಮಾಡಿದ ಹಾರ್ಡ್ ಡಿಸ್ಕನ ಬಗ್ಗೆ ವಿಚಾರಣೆ ಮಾಡಲಾಗಿದ್ದು ಅದನ್ನು ಬೆಳ್ತಂಗಡಿಯ ನದಿಗೆ ಎಸೆದಿರುವುದಾಗಿ ಅರ್ಷಿತ್ ಮತ್ತು ರಿಜ್ಞಾನ್ ತಿಳಿಸಿದ್ದಾರೆ. ನದಿಗೆ ಅರ್ಷಿತ್ ಮತ್ತು ರಿಜ್ವಾನ್‌ನನ್ನು ಕರೆತಂದು ಮಹಜರು ನಡೆಸಲಾಯಿತು. ಈ ವೇಳೆ ಬೆಳ್ತಂಗಡಿ ನದಿಯಲ್ಲಿ ಹಾರ್ಡ್ ಡಿಸ್ಕ್‌ಗಾಗಿ ಮುಳುಗು ಕಾರ್ಯ ನಡೆಸಿದ್ದಾರೆ. ಆದರೆ ಹಾರ್ಡ್ ಡಿಸ್ಕ್ ಪತ್ತೆಯಾಗಿಲ್ಲ, ಕಸ್ಟಡಿಗೆ ಪಡೆದು ಮಹಜರು ನಡೆಸಿದ ನಂತರ ಆರೋಪಿಗಳನ್ನು ಮತ್ತೆ ಉಡುಪಿಯ ಜೈಲಿಗೆ ಕಳುಹಿಸಲಾಗಿದೆ.

Exit mobile version