ಬೆಳ್ತಂಗಡಿ: ತಾಲೂಕು ಆಡಳಿತ, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಪಟ್ಟಣ ಪಂಚಾಯತ್ ಇದರ ಸಂಯುಕ್ತ ಆಶ್ರಯದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ರವರ 134ನೇ ಜನ್ಮ ದಿನಾಚರಣೆಯನ್ನು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಎ. 14ರಂದು ಆಚರಿಸಲಾಯಿತು.
ಶಾಸಕ ಹರೀಶ್ ಪೂಂಜಾರವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಧಾನ ಭಾಷಣವನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಹಶಿಕ್ಷಕ ಅರವಿಂದ ಚೊಕ್ಕಾಡಿ ಮಾಡಿದರು.
ಅರವಿಂದ ಚೊಕ್ಕಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಬಗ್ಗೆ ಮಾತನಾಡಿ ಮರಣಕ್ಕೆ ಅಂತ್ಯ ಇದೆ ಸ್ಮರಣೆಗೆ ಅಂತ್ಯ ಇಲ್ಲ, ವ್ಯಕ್ತಿ ತನ್ನ ಕ್ರಿಯೆ, ಕೃತಿ ಮೂಲಕ ಶಾಶ್ವತನಾಗುತ್ತಾನೆ. ಹಾಗೆ ಇಂದು ಸ್ಮರಣೆಗಾಗಿ ಅಂಬೇಡ್ಕರ್ ಅವರ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಎಂದರು. ಜ್ಞಾನದ ಮಹಾಸಾಗರ ಎಂದೆನಿಸಿಕೊಂಡ ಅಂಬೇಡ್ಕರ್ ಭಯ ಮುಕ್ತ ವಾತಾವರಣದ ಸೃಷ್ಟಿಗೆ ಹೋರಾಟ ನಡೆಸಿದ ಬಗ್ಗೆ ವಿವರಿಸಿದರು. ಸಮಾನತೆ, ಸ್ವಾತಂತ್ರ್ಯಹಾಗೂ ಭ್ರಾತೃತ್ವಕ್ಕೆ ಶಿಸ್ತಿನ ಸಿಪಾಯಿಯಂತೆ ಹೋರಾಟ ನಡೆಸಿದ ರೀತಿಯನ್ನು ಸ್ಮರಿಸಿದರು. ಲಿಂಗ, ಜಾತೀಯ, ಪ್ರಾದೇಶಿಕ ಮತ್ತು ಮತೀಯ ಅಸಮಾನತೆಯನ್ನು ನಿರ್ಮೂಲನೆ ಮಾಡಲು ಹರಸಾಹಸ ಪಟ್ಟ ಹೋರಾಟದ ಬಗ್ಗೆ ನೆನಪಿಸಿದರು. ಸರಿಯಾದ ಯೋಚನೆಯೇ ಸರಿಯಾದ ಗುರಿಯನ್ನು ತಲುಪಿಸುತ್ತದೆ. ಹಾಗೆಯೇ ಸರಿಯಾದ ಮಾತು, ಸರಿಯಾದ ನಡವಳಿಕೆ, ಸರಿಯಾದ ಜೀವನ ವಿಧಾನ, ಸರಿಯಾದ ಮಾನಸಿಕತೆ, ಸರಿಯಾದ ಪ್ರಯತ್ನ, ಸರಿಯಾದ ಮಾನಸಿಕ ಕೇಂದ್ರೀಕರಣ ಎಂಬ ಮಹಾ ತತ್ವಗಳನ್ನು ಆದರ್ಶವನ್ನಾಗಿಸಿ ಬದುಕಿ ಬಾಳಿದ ಅಂಬೇಡ್ಕರ್ ರವರ ಜೀವನ ಚರಿತ್ರೆಯನ್ನು ವಿವರಿಸಿ ಶುಭ ಹಾರೈಸಿದರು.
ಶಾಸಕ ಹರೀಶ್ ಪೂಂಜ ಮಾತನಾಡಿ ಡಾ. ಬಿಆರ್ ಅಂಬೇಡ್ಕರ್ ರವರ ಜೀವನವೇ ನಮಗೆ ಆದರ್ಶವಾಗಿದೆ. ಧರ್ಮಾಧಾರಿತ ಮೀಸಲಾತಿಯನ್ನು ವಿರೋಧಿಸಿದ ಅವರ ಪ್ರೇರಣಾದಾಯಿ ಚಿಂತನೆ, ಹೋರಾಟದ ಬದುಕನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಅವರು ರಾಜಕೀಯ ರಂಗದಲ್ಲಿ ಹಾಗೂ ಕಾನೂನು ಕ್ಷೇತ್ರದಲ್ಲಿ ಮಾಡಿರುವ ಶ್ರೇಷ್ಠ ಬದಲಾವಣೆಗಳ ಮೂಲಕ ನಮ್ಮ ದೇಶಕ್ಕೆ ದೊಡ್ಡ ಕೊಡುಗೆಯಾಗಿ ಸಂವಿಧಾನವನ್ನು ನೀಡಿದ್ದಾರೆ. ಅಂಬೇಡ್ಕರ್ ರವರ ಜೀವನವನ್ನು ಅವರ ಕುರಿತಾದ ಪುಸ್ತಕಗಳನ್ನು ಓದುವುದರ ಮೂಲಕ ಅಳವಡಿಸಿಕೊಳ್ಳಬೇಕು. ನಾವೆಲ್ಲ ಭಾರತೀಯರು ಎಂಬ ಚಿಂತನೆಯನ್ನು ನೀಡಿದ್ದ ನೆಲಗಟ್ಟಿನಲ್ಲಿ ನಾವು ಬದುಕಿ ಬಾಳಬೇಕು ಎಂದು ಹೇಳಿ ಶುಭ ಹಾರೈಸಿದರು.
ಸಮಾಜ ಕಲ್ಯಾಣ ಇಲಾಖೆಯ ಕಾಲೇಜು ವಿದ್ಯಾರ್ಥಿ ನಿಲಯದಲ್ಲಿ ಇದ್ದುಕೊಂಡು 2025ರ ದ್ವಿತೀಯ ಪಿ. ಯು. ಸಿ. ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಸನ್ವಿತ್ ಕೆ.ಎ., ಮನುಕುಮಾರ್ ಡಿ., ವಿದ್ಯಾಶ್ರೀ, ರಶ್ಮಿ, ಶ್ರಾವ್ಯ ಹಾಗೂ ಹಸೀನಾ ರವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ನ್ ಕಾರ್ಯನಿರ್ವಾಹಣಾಧಿಕಾರಿ ಭವಾನಿ ಶಂಕರ್, ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ರಾಜೇಶ್ ಕೆ., ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಧನಂಜಯ ಎನ್. ಎಸ್., ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಸದಸ್ಯ ಪದ್ಮನಾಭ ಸಾಲ್ಯಾನ್, ಪ.ಜಾತಿ. ಮತ್ತು ಪ.ಪಂಗಡದ ಮುಖಂಡರುಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಯ ಮುಖ್ಯಸ್ಥರು ಹಾಗೂ ವಿದ್ಯಾರ್ಥಿ ನಿಲಯದ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಬೆಳ್ತಂಗಡಿ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ನಾಡಗೀತೆಯನ್ನು ಹಾಡಿದರು. ತಾಲೂಕು ದಂಡಾಧಿಕಾರಿ ಪೃಥ್ವಿ ಸಾನಿಕಂ ಸಂವಿಧಾನದ ಪೀಠಿಕೆ ಬೋಧಿಸಿದರು. ತಾಲೂಕು ಪಂಚಾಯತ್ ಸಿಬ್ಬಂದಿ ಜಯಾನಂದ ವಂದಿಸಿದರು.