ಬೆಳ್ತಂಗಡಿ: ಬಹುದಿನಗಳಿಂದ ವಿವಿಧ ರಾಜಕೀಯ ಚಟುವಟಿಕೆಗಳು ನಡೆಯುವ ಮೂಲಕ ಕುತೂಹಲದ ಕೇಂದ್ರ ಬಿಂದುವಾಗಿರುವ ಇಳಂತಿಲದಲ್ಲಿ ಇದೀಗ ಮತ್ತೊಂದು ಹಣಾಹಣಿಗೆ ವೇದಿಕೆ ಸಿದ್ಧಗೊಂಡಿದೆ. ಸ್ವಪಕ್ಷೀಯರಿಂದಲೇ ಅವಿಶ್ವಾಸ ಗೊತ್ತುವಳಿಗೆ ಒಳಪಟ್ಟು ಪದಚ್ಯುತಿಗೊಂಡಿರುವ ತಿಮ್ಮಪ್ಪ ಗೌಡರವರಿಂದ ತೆರವಾಗಿರುವ ಇಳಂತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಇದೀಗ ಚುನಾವಣೆ ಘೋಷಣೆಯಾಗಿದ್ದು ಯಾರು ನೂತನ ಅಧ್ಯಕ್ಷರಾಗುತ್ತಾರೆ ಎಂದು ಕುತೂಹಲ ಮೂಡಿಸಿದೆ.
ಗ್ರಾಮ ಪಂಚಾಯತ್‌ನ ಅಧ್ಯಕ್ಷ ಸ್ಥಾನದ ಚುನಾವಣೆಗೆ ದ. ಕ. ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದು ಚುನಾವಣಾಧಿಕಾರಿಯಾಗಿ ಬೆಳ್ತಂಗಡಿ ತಹಶಿಲ್ದಾರ್ ಪೃಥ್ವಿ ಸಾನಿಕಂ ನೇಮಕಗೊಂಡಿದ್ದಾರೆ. ಎ.16ರಂದು ಚುನಾವಣೆ ನಡೆಯಲಿದ್ದು ಎಲ್ಲಾ ಸದಸ್ಯರಿಗೆ ನೋಟೀಸು ಜಾರಿಯಾಗಿದೆ. 14 ಸದಸ್ಯರ ಪೈಕಿ 11 ಬಿ.ಜೆ.ಪಿ ಬೆಂಬಲಿತ ಸದಸ್ಯರನ್ನು ಹೊಂದಿರುವ ಗ್ರಾಮ ಪಂಚಾಯತ್‌ನಲ್ಲಿ ಕಳೆದ ಸುಮಾರು ಒಂದೂವರೆ ವರ್ಷದಿಂದ ಸದಸ್ಯರೊಳಗೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಗ್ರಾಮ ಪಂಚಾಯತ್ ಅಧ್ಯಕ್ಷ ತಿಮ್ಮಪ್ಪ ಗೌಡರವರನ್ನು ಪದಚ್ಯುತಗೊಳಿಸುವ ಮೂಲಕ ಒಂದು ಹಂತಕ್ಕೆ ಕೊನೆಗೊಂಡಿತ್ತು. ಉಪ್ಪಿನಂಗಡಿ ಸಿ.ಎ.ಬ್ಯಾಂಕ್ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪದಲ್ಲಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಕೆ.ವಿ.ಪ್ರಸಾದ್ ಅವರನ್ನು ಬಿಜೆಪಿಯಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿರುವುದರಿಂದ ರಾಜಕೀಯ ಮತ್ತೊಂದು ತಿರುವು ಪಡೆದಿತ್ತು. ಇದೀಗ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಕ್ಷೇತ್ರಕ್ಕೆ ನಿಗದಿಯಾಗಿರುವುದರಿಂದ ಗ್ರಾಮ ಪಂಚಾಯತ್‌ನ ಎಲ್ಲಾ ಸದಸ್ಯರು ಸ್ಪರ್ಧಿಸಲು ಅರ್ಹತೆ ಪಡೆದಿದ್ದಾರೆ.
ಅವಿಶ್ವಾಸ ಗೊತ್ತುವಳಿಯ ಸಂದರ್ಭದಲ್ಲಿ ಪದಚ್ಯುತ ಅಧ್ಯಕ್ಷರ ಪರ ರಮೇಶ ಅಂಬೊಟ್ಟು ಅವರು ಮಾತ್ರ ಕೈ ಎತ್ತಿದ್ದು ಬಿಜೆಪಿ ಬೆಂಬಲಿತರಾಗಿ ಅವರನ್ನು ಸ್ಪರ್ಧಿಸುವಂತೆ ಪಕ್ಷ ಸೂಚನೆ ನೀಡುವ ಸಾಧ್ಯತೆ ಇದೆ. ಉಳಿದಂತೆ ಬಂಡಾಯ ಬಿಜೆಪಿ ಸದಸ್ಯರ ಕಡೆಯಿಂದ 2ನೇ ಬಾರಿ ಗ್ರಾಮ ಪಂಚಾಯತ್ ಸದಸ್ಯರಾಗಿರುವ ವಸಂತ ಶೆಟ್ಟಿಯವರು ಸ್ಪರ್ಧಿಸುವುದು ಬಹುತೇಕ ನಿಶ್ಚಿತವಾಗಿದೆ. ಕಾಂಗ್ರೆಸ್ ಪಕ್ಷ 2 ಸದಸ್ಯರನ್ನು ಮಾತ್ರ ಹೊಂದಿದ್ದು ಕಳೆದ ಭಾರಿ ತಾನೊಬ್ಬನೇ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದರೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿ ಮತ್ತು ಎಸ್‌ಡಿಪಿಐ ಬೆಂಬಲಿಗ ಸದಸ್ಯರ 4 ಮತ ಪಡೆಯುವಲ್ಲಿ ಸಫಲರಾಗಿದ್ದ ಯು.ಕೆ. ಇಸುಬು ಅವರು ಈ ಬಾರಿ ಪಕ್ಷದ ಸ್ಥಳೀಯ ಪ್ರಮುಖರ ನಿರ್ಧಾರದಂತೆ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ. ಬಿಜೆಪಿ ಪರವಾಗಿ ರಮೇಶ ಅಂಬೊಟ್ಟುರವರು ಸ್ಪರ್ಧಿಸಲು ಆಸಕ್ತಿ ತೋರಿಲ್ಲ ಎಂದೂ ಹೇಳಲಾಗುತ್ತಿದ್ದು ಬಿಜೆಪಿ ಬೆಂಬಲಿತ ಸದಸ್ಯ ವಸಂತ ಶೆಟ್ಟಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಯಿದೆ. ಪೂರ್ವಾಹ್ನ ೧೦ರಿಂದ 11ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಅಪರಾಹ್ನ 1ರಿಂದ 1.05ರವರೆಗೆ ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಅಪರಾಹ್ನ 1.05ರಿಂದ 1.15 ಗಂಟೆವರೆಗೆ ಅವಕಾಶವಿದೆ. ಅಗತ್ಯ ಬಿದ್ದಲ್ಲಿ ಅಪರಾಹ್ನ 1.30ರಿಂದ ಮತದಾನ ನಡೆಯಲಿದೆ. ಹಾಲಿ ಉಪಾಧ್ಯಕ್ಷೆ ಸವಿತಾ ಅವರು ಪ್ರಭಾರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.