ಬೆಳಾಲು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಬೆಳ್ತಂಗಡಿ ಗೊಂಚಲು ಸ್ತ್ರೀಶಕ್ತಿ ಸಂಘ ಬೆಳಾಲು ಇದರ ವತಿಯಿಂದ ಇಲ್ಲಿನ ಪಂಚಾಯತ್ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಗೊಂಚಲಿನ ಅಧ್ಯಕ್ಷೆ ಆಶಾ ಭಟ್ ಆಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು. ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾಕಿ ಲಲಿತಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾ ಉದ್ಘಾಟನಾ ಭಾಷಣ ಮಾಡಿದರೆ, ಲಲಿತಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅತಿಥಿಗಳಾಗಿ ಉಪಸ್ಥಿತರಿದ್ದ ನಿವೃತ್ತ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರತ್ನಾವತಿ ಹಾಗೂ ಆರ್ಧಿಕ ಸಾಕ್ಷರತಾ ಸಮಾಲೋಚಕಿ ಉಷಾ ನಾಯಕ್ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಸ್ತ್ರೀ ಶಕ್ತಿ ಸಂಘಗಳ ಉಪಾಧ್ಯಕ್ಷೆ ನಿಶಾ ಉಪಸ್ಥಿತರಿದ್ದರು.
ನಿವೃತ್ತ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರತ್ನಾವತಿ ಅವರಿಗೆ ಗೌರವ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರಾದ ಲಲಿತಾ, ಲೀಲಾ, ಜೆಸ್ಸಿ, ಸಹಾಯಕಿಯರಾದ ವನಜಾಕ್ಷಿ, ಪುಪ್ಪಲತಾ, ಸುಶೀಲ ಹಾಗೂ ಕಳೆದ 25 ವರ್ಷಗಳಿಂದ ಕೀರ್ತಿ ಸ್ತ್ರೀಶಕ್ತಿ ಮಾಯಾ ಸಂಘದ ಸಕ್ರಿಯ ಸದಸ್ಯೆ ಮುತ್ತು ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಬೆಳ್ಳಿ ಹಬ್ಬದ ಪ್ರಯುಕ್ತ ಗ್ರಾಮದ ಎಲ್ಲಾ ಅಂಗನವಾಡಿಗಳಿಗೆ ಸ್ಮರಣಿಕೆ ನೀಡಲಾಯಿತು. ವಿವಿಧ ರೀತಿಯ ಸ್ಪರ್ದೆಗಳನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಬಳಿಕ, ಸಂಘದ ಸದಸ್ಯರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.
ಗ್ರಾಮದ ಎಲ್ಲಾ ಸ್ತ್ರೀ ಶಕ್ತಿ ಸದಸ್ಯರಿಗೆ ನೆನಪಿನ ಕಾಣಿಕೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು ಲತಾ ಕೇಶವ ಹಾಗೂ ಲತಾ ಬಾಲಚಂದ್ರ ಕಾರ್ಯಕ್ರಮ ನಿರೂಪಿಸಿದರು. ಆಶಾ ಓಣಾಚೆ ಸ್ವಾಗತಿಸಿದರು ಗೊಂಚಲಿನ ಕಾರ್ಯದರ್ಶಿ ಹರಿಣಾಕ್ಷಿ ಸಹಕರಿಸಿದರು. ಆರತಿ ವಂದಿಸಿದರು.