ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ. ವಿ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಈ ಸಮಾರಂಭವನ್ನು ಶಾಲಾ ಸಂಚಾಲಕ ಅನಂತ ಪದ್ಮನಾಭ ಭಟ್ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆ ದೀಪದಿಂದ ಎಲ್ಲಾ ವಿದ್ಯಾರ್ಥಿಗಳು ಹಣತೆ ಬೆಳಗಿಸಿ ಪ್ರೀತಿ ಮತ್ತು ಮಾನವತೆಯ ಹಾಗು ಸತ್ಯದ ಜೊತೆಗೆ ಬದುಕುವ ಪ್ರಮಾಣ ಮಾಡಿದರು.
ಮಕ್ಕಳ ಬಾಲ್ಯದಿಂದ ಹಿಡಿದು ಇಲ್ಲಿಯವರೆಗಿನ ವಿಡಿಯೋವನ್ನು ತೋರಿಸಲಾಯಿತು. ಬಳಿಕ ವಿದ್ಯಾರ್ಥಿಗಳು ತಮ್ಮ ನೆನಪಿನ ಬುತ್ತಿಯನ್ನು ಅಭಿಪ್ರಾಯದ ಮುಖಾಂತರ ಪ್ರಸ್ತುತ ಪಡಿಸಿದರು. ಅದಾದ ಬಳಿಕ ಶಿಕ್ಷಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ಶಾಲಾ ಸಂಚಾಲಕ ಅನಂತಪದ್ಮನಾಭ ಭಟ್ ಶಾಲೆಯಲ್ಲಿ ಕಲಿತಂತಹ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಮರೆಯದೆ ಪಾಲಿಸಿ ಎಂದು ಶುಭ ಹಾರೈಸಿದರು.
ವಿದಾಯ ಕೂಟದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಅನೇಕ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು. ಬಳಿಕ ಎಲ್ಲ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು. 10ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಜ್ಞಾನದೇಗುಲಕ್ಕೆ ಟಿವಿಯನ್ನು ಕೊಡುಗೆಯಾಗಿ ನೀಡಿದರು. ವಿದಾಯಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು. ಈ ಕಾರ್ಯಕ್ರಮವನ್ನು ಶಿಕ್ಷಕಿ ರೇಖಾ, ಅಂಜು ನೆರವೇರಿಸಿದರು. ಶಾಲಾ ಶಿಕ್ಷಕಿ ರಮಾ ರಾಜೇಶ್ ವಂದಿಸಿದರು. ಶಾಲಾ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.