ಬೆಳ್ತಂಗಡಿ: ಕರುನಾಡ ಸ್ಪೈಡರ್‌ಮ್ಯಾನ್ ಖ್ಯಾತಿಯ ಜ್ಯೋತಿರಾಜ್ ಮಾ.೨೩ರಂದು ಬಂಟ್ವಾಳ ತಾಲೂಕಿನ ವಗ್ಗ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಬೆಟ್ಟವನ್ನು ಅರ್ಧ ಗಂಟೆಯಲ್ಲಿ ಹತ್ತಿ ಮತ್ತೊಂದು ಸಾಹಸ ಮೆರೆದಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಸುಡುಬಿಸಿಲಿನ ನಡುವೆ ಬಂಡೆ ಹತ್ತಲು ಆರಂಭಿಸಿದ ಜ್ಯೋತಿರಾಜ್ ಕೇವಲ 30 ನಿಮಿಷದಲ್ಲಿ ೩೫೦ ಅಡಿ ಎತ್ತರದ ಬಂಡೆ ಹತ್ತಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಪುರಾಣ ಪ್ರಸಿದ್ಧವಾಗಿರುವ ಕಾರಿಂಜ ಬೆಟ್ಟದ ಮೇಲಿರುವ ಶಿವನ ದೇವಾಲಯಕ್ಕೆ ಪೊದೆಗಳಿಂದ, ಕಲ್ಲು ಬಂಡೆಗಳಿಂದ ಅವಿತಿರುವ ಬೆಟ್ಟವನ್ನು ಹತ್ತುವ ಮೂಲಕ ಜ್ಯೋತಿರಾಜ್ ನೆರೆರವರಲ್ಲಿ ಅಚ್ಚರಿ ಮೂಡಿಸಿದ್ದಾರೆ. ಬಳಿಕ ಮಾತನಾಡಿದ ಅವರು ಶ್ರೀ ಕಾರಿಂಜೇಶ್ವರ ದೇವಸ್ಥಾನ ತುಂಬಾ ಪವಿತ್ರ ಜಾಗ. ಈ ಬೆಟ್ಟ ಹತ್ತಲು ತುಂಬಾ ಕಷ್ಟ ಇತ್ತು. ಕೈ ಸುಡುತ್ತಿತ್ತು. ಆದರೂ ಮಧ್ಯಾಹ್ನದ ಬಿಸಿಲು ಜಾಸ್ತಿ ಆಗುವುದರೊಳಗೆ ಬೆಟ್ಟ ಹತ್ತಿ ಮುಗಿಸಲು ಮೊದಲೇ ಪ್ಲಾನ್ ಮಾಡಿದ್ದೆ. ೩೫೦ ಅಡಿ ಹತ್ತುವಾಗ 1000 ಅಡಿ ಹತ್ತಿದಷ್ಟು ಸುಸ್ತಾಯಿತು. ಬೆಟ್ಟ ಹತ್ತಲು ಸಹಕರಿಸಿದ ಬೆಳ್ತಂಗಡಿ, ಬಂಟ್ವಾಳ ಹಾಗೂ ವಗ್ಗದ ಜನತೆಗೆ, ಕಾರಿಂಜೇಶ್ವರ ದೇವಸ್ಥಾನದ ಸಮಿತಿಯವರಿಗೆ, ವಿವಿಧ ಸಂಘ-ಸಂಸ್ಥೆಗಳ ಸದಸ್ಯರಿಗೆ, ವಿಶೇಷವಾಗಿ ಈ ಹಿಂದೆ ಗಡಾಯಿಕಲ್ಲು ಬೆಟ್ಟ ಹತ್ತಲು ಸಹಕರಿಸಿದ್ದ ಅನಿಲ್ ಕಕ್ಕಿಂಜೆ, ಸಚಿನ್ ಭಿಡೆ ಹಾಗೂ ಎಮ್‌ಆರ್ ಪ್ರಸನ್ನರವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಮುಂದೆ ತಾನು ಅಮೇರಿಕಾದ ಏಂಜಲ್ ಫಾಲ್ಸ್ ಹತ್ತುವ ಗುರಿ ಹೊಂದಿದ್ದೇನೆ. ಕಾರಿಂಜೇಶ್ವರ ದೇವಸ್ಥಾನದ ಬಂಡೆ ಹತ್ತಿ ದೇವರ ಆಶೀರ್ವಾದ ಪಡೆದು ಅಮೇರಿಕಾ ಏಂಜಲ್ ಫಾಲ್ ಹತ್ತುವ ಅವಕಾಶ ಸಿಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಹೇಳಿದ್ದಾರೆ. ಕಾರಿಂಜೇಶ್ವರ ದೇವಸ್ಥಾನದ ಬೆಟ್ಟ ಹತ್ತಿದ ಬಳಿಕ ಕಾರಿಂಜ ದೇವಸ್ಥಾನದ ವತಿಯಿಂದ ಜ್ಯೋತಿರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಮಿಥುನ್‌ರಾಜ್ ನಾವಡ, ವ್ಯವಸ್ಥಾಪಕ ಜಯಶಂಕರ್ ಉಪಾಧ್ಯಾಯ, ವಿನಯ ಕುಮಾರ್, ಸಿಬ್ಬಂದಿ ವರ್ಗ ಹಾಗೂ ಊರವರು ಉಪಸ್ಥಿತರಿದ್ದರು.
ಸುದ್ದಿ ಬಿಡುಗಡೆ ಕಚೇರಿಗೆ ಬಂದಿದ್ದರು: ಕಾರಿಂಜ ಬೆಟ್ಟ ಹತ್ತುವ 2 ದಿನದ ಮೊದಲು ಜ್ಯೋತಿರಾಜ್ ಅವರು ಬೆಳ್ತಂಗಡಿ ಸುದ್ದಿ ಬಿಡುಗಡೆ ಕಚೇರಿಗೆ ಭೇಟಿ ನೀಡಿದ್ದರು.
ಆತ್ಮಹತ್ಯೆ ಮಾಡಿಕೊಳ್ಳಲು ಚಿತ್ರದುರ್ಗದ ಬೆಟ್ಟ ಹತ್ತಿದ್ದರು!
ತಂದೆ, ತಾಯಿಯ ಕೊರಗು ಕಾಡುತ್ತಲೇ ಇದ್ದ ಜ್ಯೋತಿರಾಜ್ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿ ಚಿತ್ರದುರ್ಗದ ಬೆಟ್ಟವನ್ನು ಏರಿದ್ದರು. ಆದರೆ ಇವರು ಬೆಟ್ಟವನ್ನು ಏರುವ ಶೈಲಿಯನ್ನು ನೋಡಿದ ಪ್ರೇಕ್ಷಕರು ಮೂಕವಿಸ್ಮಿತರಾಗುತ್ತಾರಲ್ಲದೆ ಚಪ್ಪಾಳಿ ತಟ್ಟಿದ್ದರು. ಸಾಯಲು ಮುಂದಾಗಿದ್ದ ಜ್ಯೋತಿರಾಜ್‌ಗೆ ಜನರನ್ನು ನೋಡಿ ಇಂದು ಬೇಡ ನಾಳೆ ನೋಡೋವಾ ಎಂದು ವಾಪಸು ಬರುವಾಗ ಕೆಳಗೆ ನೆರೆದ ಜನರು ಅಭಿನಂದಿಸಿದ್ದರು. ಇವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಧನೆಯ ಬಗ್ಗೆ ಗೌರವದ ಮಾತುಗಳನ್ನಾಡಿದ್ದರು. ಆ ದಿನವೇ ಜ್ಯೋತಿರಾಜ್ ಅವರ ಜೀವನದ ಟನಿಂಗ್ ದಿನವಾಯಿತು. ಸಾಯಲು ಹೋಗಿದ್ದ ಜ್ಯೋತಿರಾಜ್ ಇದೀಗ ಸಾಧನೆಯ ಶಿಖರವೇರುತ್ತಾ ಕರ್ನಾಟಕದ ಮನೆ ಮಗನಾಗಿದ್ದಾರೆ. ಅನೇಕರ ಪಾಲಿಗೆ ದೇವರಾಗಿ, ಅನೇಕರ ಜೀವ ಕಾಪಾಡಿದ ಜೀವ ಕಳೆದುಹೋದವರ ಮನೆಯವರಿಗಾಗಿ ಪ್ರಾಣವನ್ನು ಪಣಕ್ಕಿಟ್ಟ ಓರ್ವ ಸಂತನಾಗಿ ಎತ್ತರಕ್ಕೆ ಬೆಳೆದಿದ್ದಾರೆ.
ಶವಗಳನ್ನು ಹುಡುಕಲು ಜ್ಯೋತಿರಾಜ್ ಅನೇಕ ಬಾರಿ ಜೋಗ ಜಲಪಾತವನ್ನು ಇಳಿದು ಏರಿದ್ದಾರೆ. ಜಲಪಾತದ ಕಂದಕಕ್ಕೆ ಬಿದ್ದು ಎರಡು ದಿನ ಕಾಣೆಯಾಗಿದ್ದರು. ಅಲ್ಲಿಯ ತನಕ ಅವರಿಗೆ ಒಟ್ಟು 11 ಆಪರೇಷನ್ ಆಗಿದೆ. ಕೈ, ಕಾಲಿಗೆ 4 ರಾಡ್ ಹಾಕಿಸಿಕೊಂಡಿದ್ದಾರೆ. ಆದರೆ, ಇವರು ಬಂಡೆಗಳನ್ನು ಹತ್ತಿ ಬಿದ್ದಿರುವುದು ಕಡಿಮೆ. ಅವರಿವರನ್ನು ತಾಪಾಡಲು ಹೋದಾಗ ಜಿದ್ದು ಗಾಯಳಾಗಿರುವುದೇ ಹೆಚ್ಚು. 900 ಅಡಿ ಅಳದ ಜೋಗದಲ್ಲಿ ಸುಮಾರು ಸಲ ಇಳಿದಿದ್ದಾರೆ.
3ನೇ ವಯಸ್ಸಿನಲ್ಲಿ ಕಾಣೆಯಾಗಿದ್ದ ಜ್ಯೋತಿರಾಜ್: ಬಡವರ ಕಲ್ಯಾಣಕ್ಕಾಗಿ ಟ್ರಸ್ಟ್ ನಡೆಸುತ್ತಿರುವ ಜ್ಯೋತಿರಾಜ್ ಅವರು ಇನ್ನಷ್ಟು ಸಮಾಜ ಸೇವೆ ಮಾಡಲು ಆರ್ಥಿಕ ಸಹಾಯಧನದ ನಿರೀಕ್ಷೆಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ಅವರು ಸಾರ್ವಜನಿಕರ ಸಹಕಾರ ಯಾಚಿಸಿದ್ದಾರೆ. ತನ್ನ ಮೂರನೇ ವಯಸ್ಸಿಗೆ ಅವರ ಪೋಷಕರು ತಮಿಳುನಾಡಿನ ಜಾತ್ರೆಯಲ್ಲಿ ಕಾಣೆಯಾಗುತ್ತಾರೆ. ಬಳಿಕ ತಮಿಳುನಾಡು ಮೂಲದ ವ್ಯಕ್ತಿಯೊಬ್ಬರ ಕೈಗೆ ಸಿಕ್ಕ ಜ್ಯೋತಿರಾಜ್ ಅವರನ್ನು ಚಿತ್ರದುರ್ಗದಲ್ಲಿರುವ ಮನೆಯಲ್ಲಿ ಸಾಕುತ್ತಾರೆ. ಅವರ ಬೇಕರಿಯಲ್ಲಿ ಕೆಲಸ ಮಾಡುತ್ತಾ ಬೆಳೆಯುವ ಜ್ಯೋತಿರಾಜ್ ಅವರು ಶಿಕ್ಷಣದಿಂದ ವಂಚಿತರಾಗುತ್ತಾರೆ. ಮಂಕಿ ಮ್ಯಾನ್ ಆಫ್ ಕರ್ನಾಟಕ ಎಂದು ಹೆಸರು ಪಡೆದಿರುವ ಜ್ಯೋತಿರಾಜ್‌ಗೆ ಇನ್ನು ಕೂಡ ಸ್ವಂತ ಸೂರಿಲ್ಲ, ಚಿಕಿತ್ಸೆಗಾಗಿ ಮಾಡಿದ ಸಾಲ ಇನ್ನೂ ತೀರಿಲ್ಲ. ತಂದೆ, ತಾಯಿಯನ್ನು ಕಳೆದುಕೊಂಡ ಇವರದು ದಿನ ಕಷ್ಟದ ಬದುಕಾಗಿತ್ತು. ಹಾಗಾಗಿ ಸಾಕುಮನೆಯಿಂದ ಹೊರಬಂದು ಗಾರೆ ಕೆಲಸ ಮಾಡಿಕೊಂಡಿದ್ದರು.
ಕಳೆದ ವರ್ಷ ಗಡಾಯಿಕಲ್ಲು ಹತ್ತಿದ್ದರು: ಕಳೆದ ವರ್ಷ ಬೆಳ್ತಂಗಡಿಯ ಗಡಾಯಿಕಲ್ಲು ಹತ್ತಿದ್ದ ಜ್ಯೋತಿರಾಜ್ ಅವರು ಉಡುಪಿ, ಮಂಗಳೂರಿನ ಬಹುಮಹಡಿಯ ಕಟ್ಟಡವನ್ನು ಹತ್ತಿದ್ದರು. ಅದರಲ್ಲಿ ಬಂದ ಹಣದಿಂದ ರೋಪು, ಸೇಫ್ಟಿ ಜಾಕೆಟ್ ಖರೀದಿಸಿದ್ದರು. ಮಲೆನಾಡು ತನಗೆ ಅತ್ಯಂತ ಇಷ್ಟದ ಊರು. ತಾನು ದೈವ, ದೇವರಲ್ಲಿ ನಂಬಿಕೆಯುಳ್ಳವನು. ಧರ್ಮಸ್ಥಳ, ಕೊರಗಜ್ಜನ ಕ್ಷೇತ್ರ ಹೀಗೆ ಹಲವು ದೈವ, ದೇಸ್ಥಾನಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದೇನೆ ಎಂದು ಹೇಳುವ ಜ್ಯೋತಿರಾಜ್ ಅವರು ದೇಶಾದ್ಯಂತ ಜನರ ಕಾಪಾಡಲು ಹೋಗಿದ್ದಾರೆ. ವಿವಿಧೆಡೆ ಹಲವು ಮೃತದೇಹಗಳನ್ನು ಹೊರತೆಗೆದಿದ್ದಾರೆ. ಇಲ್ಲಿಯ ತನಕ ಒಟ್ಟು 50ಕ್ಕೂ ಹೆಚ್ಚು ಯುವಕರಿಗೆ ಜ್ಯೋತಿರಾಜ್ ತರಬೇತಿ ನೀಡಿದ್ದಾರೆ. ಪ್ರಸ್ತುತ 10 ಯುವಕರು ತರಬೇತಿ ಪಡೆಯುತ್ತಿದ್ದಾರೆ. ಇವರಿಂದ ತರಬೇತಿ ಪಡೆದ ೨೦ ಯುವಕರು ಸೇನೆ ಸೇರಿದ್ದಾರೆ. ಇಬ್ಬರು ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ್ದಾರೆ.
ಶ್ರಮಿಕ ಕಚೇರಿಯಲ್ಲಿ ಶಾಸಕರಿಂದ ಸನ್ಮಾನ: ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಮಾ. 24ರಂದು ಬೆಳ್ತಂಗಡಿ ಶಾಸಕರ ಕಚೇರಿ ಶ್ರಮಿಕಕ್ಕೆ ಭೇಟಿ ನೀಡಿದರು. ಶಾಸಕ ಹರೀಶ್ ಪೂಂಜ ಅವರು ಜ್ಯೋತಿರಾಜ್ ಅವರನ್ನು ಸನ್ಮಾನಿಸಿ ಗೌರವಿಸಿದರು.