Site icon Suddi Belthangady

ಎನ್.ಎಂ.ಎಂ.ಎಸ್. ಪರೀಕ್ಷೆಯಲ್ಲಿ ಅಂಡಿಂಜೆ ಶಾಲಾ ಮಕ್ಕಳ ಅಭೂತಪೂರ್ವ ಸಾಧನೆ: ದಿಶಾ ಜಿಲ್ಲೆಗೆ ಪ್ರಥಮ – ಪ್ರಾಪ್ತಿ ಬೆಳ್ತಂಗಡಿ ತಾಲೂಕಿಗೆ ದ್ವಿತೀಯ

ಅಂಡಿಂಜೆ : 2024-25ನೇ ಸಾಲಿನಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಆಯೋಜಿಸುವ ರಾಷ್ಟ್ರೀಯ ಮೀನ್ಸ್ ಕಮ್ ಮೆರಿಟ್ ಸ್ಕಾಲರ್ ಶಿಪ್(ಎನ್ಎಂಎಂಎಸ್) ಅರ್ಹತಾ ಪರೀಕ್ಷೆಯಲ್ಲಿ ಅಂಡಿಂಜೆಯ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿಗಳಾದ ದಿಶಾ 136 ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಹಾಗೂ ಪ್ರಾಪ್ತಿ 120 ಅಂಕಗಳೊಂದಿಗೆ ಬೆಳ್ತಂಗಡಿ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಅರ್ಹತಾ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಬೆಳ್ತಂಗಡಿ ತಾಲೂಕಿಗೆ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯಲು ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿ, ವಿದ್ಯಾರ್ಥಿಗಳ ಯಶಸ್ಸಿಗೆ ಭದ್ರ ಬುನಾದಿ ಹಾಕಿದ ಹಿರಿಮೆ ಶಾಲಾ ಮುಖ್ಯ ಶಿಕ್ಷಕ ಶಿವಶಂಕರ್ ಭಟ್ ಹಾಗೂ ಶಿಕ್ಷಕ ವರ್ಗಕ್ಕೆ ಸಲ್ಲುತ್ತದೆ.

ಕಳೆದ ಜೂನ್ ತಿಂಗಳಿಂದ ಇಲ್ಲಿಯವರೆಗೆ ಅರ್ಹತಾ ಪರೀಕ್ಷೆಗೆ ಹಾಜರಾಗುವ ಮಕ್ಕಳಿಗೆ ಶಾಲೆಯಲ್ಲಿ ವಿಶೇಷ ತರಗತಿಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ.

ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಎಂಬಂತೆ ವಿದ್ಯಾರ್ಥಿಗಳಿಗೆ ಅಣಕು ಪರೀಕ್ಷೆ ನಡೆಸಿ ಮೌಲ್ಯಮಾಪನ ಮಾಡಿ ಸಂಪೂರ್ಣ ತರಬೇತಿ ನೀಡಿ ಉತ್ತಮ ಫಲಿತಾಂಶ ಗಳಿಸುವ ಯೋಜನೆ ಸಫಲವಾಗಿದೆ ಎಂದು ಮುಖ್ಯ ಶಿಕ್ಷಕ ಶಿವಶಂಕರ ಭಟ್ ತಿಳಿಸಿದರು.

ದಿಶಾ ಅವರು ಅಂಡಿಂಜೆಯ ವಸಂತ ಹೆಗ್ಡೆ ಹಾಗೂ ರಮಾವತಿ ದಂಪತಿಯ ಪುತ್ರಿ. ಪ್ರಾಪ್ತಿ ಅವರು ವಿಜಯ ಬಂಗೇರ ಹಾಗೂ ಮಲ್ಲಿಕಾ ದಂಪತಿಯ ಪುತ್ರಿ.

Exit mobile version