ಧರ್ಮಸ್ಥಳ: ಗ್ರಾಮದ ಹಿತರಕ್ಷಣಾ ವೇದಿಕೆ ವತಿಯಿಂದ ಧರ್ಮಸ್ಥಳ ಗ್ರಾಮಸ್ಥರ ಸಮಾವೇಶವು ಮಾ. 27ರಂದು ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಿತು. ದುಷ್ಟರ ವಿರುದ್ಧ ಅಗ್ನಿಪಥ ಕ್ಷೇತ್ರದ ಪರ ಶಾಂತಿಪತ ಎಂಬ ಸಂಕಲ್ಪದೊಂದಿಗೆ ಸಮಾವೇಶಕ್ಕೆ ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂದೆ ಧರ್ಮಸ್ಥಳ ಗ್ರಾಮಸ್ಥರು ಸಮೂಹ ಪ್ರಾರ್ಥನೆ ನಡೆಸಿ ಪಾದಯಾತ್ರೆಯ ಮೂಲಕ ಅಮೃತವರ್ಷಿಣಿ ಸಭಾಂಗಣಕ್ಕೆ ತೆರಳಿ ದೀಪ ಪ್ರಜ್ವಲಿಸುವ ಮೂಲ ಪ್ರತಿಭಟನೆಗೆ ಚಾಲನೆ ನೀಡಲಾಯಿತು.
ಧರ್ಮಸ್ಥಳದ ಮೇಲೆ ಸುಳ್ಳು ಆರೋಪಗಳ ವಿರುದ್ಧ ಕಠಿಣ ಕಾನೂನು ಕ್ರಮದ ಆಗ್ರಹದೊಂದಿಗೆ, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಒಂದು ದಿನದ ಹರತಾಳ ಮತ್ತು ಪ್ರತಿಭಟನಾ ಸಭೆ ಜರುಗಿತು. ಈ ಸಭೆಯಲ್ಲಿ ಸಾವಿರಾರು ಗ್ರಾಮಸ್ಥರು ಭಾಗವಹಿಸಿದರು.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕ್ಷೇತ್ರದ ಬಗ್ಗೆ ಆಧಾರರಹಿತ ಆರೋಪಗಳು ಹರಿದಾಡುತ್ತಿದ್ದು, ಇದು ಗ್ರಾಮಸ್ಥರ ಆತ್ಮಗೌರವಕ್ಕೆ ತೀವ್ರ ಧಕ್ಕೆಯಾಗಿದೆಯೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ವಿಶೇಷವಾಗಿ, ಸೌಜನ್ಯ ಪ್ರಕರಣಕ್ಕೆ ಕ್ಷೇತ್ರದ ಯಾವುದೇ ಸಂಬಂಧವಿಲ್ಲದಿದ್ದರೂ, ಈ ವಿಷಯವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಕ್ಷೇತ್ರದ ತೇಜೋವಧೆ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದರು.
ಕ್ಷೇತ್ರದ ಮೇಲಾಗುತ್ತಿರುವ ಸುಳ್ಳು ಆರೋಪ ಮತ್ತು ಷಡ್ಯಂತ್ರದ ವಿರುದ್ಧ ನಡೆದ ಸಮಾವೇಶದ ಅಧ್ಯಕ್ಷತೆಯನ್ನು ನಾರಾಯಣ ರಾವ್ ವಹಿಸಿ ಮಾತನಾಡಿ ಧರ್ಮಸ್ಥಳವನ್ನು ಪೂಜ್ಯ ಹೆಗ್ಗಡೆಯವರಿಗೆ ಮಂಜುನಾಥ ನೀಡಿದ್ದಾನೆ, ಅದನ್ನು ಮತ್ತೊಬ್ಬರಿಗೆ ಕೇಳುವ ಹಕ್ಕು ಇಲ್ಲ ಮಂಜುನಾಥ ಕೊಟ್ಟರೆ ತೆಗೆದುಕೊಳ್ಳಿ ಎಂದರು.
ವೇದಿಕೆಯಲ್ಲಿ ಧರ್ಮಸ್ಥಳ ಹಿತರಕ್ಷಣಾ ವೇದಿಕೆಯ ಕೋಶಾಧಿಕಾರಿ ಶ್ರೀನಿವಾಸ್ ರಾವ್, ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲಾ, ಹರೀದಾಸ್ ಗಾಂಭೀರ, ಸುಂದರ ಗೌಡ ಪುಡ್ಕೆತ್ತು, ಧರ್ಮಸ್ಥಳ ಹಿತರಕ್ಷಣಾ ವೇದಿಕೆಯ ಅದ್ಯಕ್ಷ ಕೇಶವ ಪಿ. ಗೌಡ ಬೆಳಾಲು, ಚಂದನ್ ಕಾಮತ್ ಧರ್ಮಸ್ಥಳ , ಪ್ರೀತಂ ಡಿ ಪೂಜಾರಿ ಧರ್ಮಸ್ಥಳ, ಶಾಂಭವಿ ರೈ ಧರ್ಮಸ್ಥಳ, ಧನಕೀರ್ತಿ ಅರಿಗ ಧರ್ಮಸ್ಥಳ, ಅಖಿಲ್ ಶೆಟ್ಟಿ ನೇತ್ರಾವತಿ, ಪ್ರಭಾಕರ್ ಪೂಜಾರಿ ಕನ್ಯಾಡಿ, ಭುಜಬಲಿ ಧರ್ಮಸ್ಥಳ ಉಪಸ್ಥಿತರಿದ್ದರು. ಗ್ರಾಮಸ್ಥರು, ಧರ್ಮಸ್ಥಳದ ಹಿತರಕ್ಷಣಾ ವೇದಿಕೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿ, ಸುಳ್ಳು ಪ್ರಚಾರ ಮಾಡುವವರ ವಿರುದ್ಧ ತಕ್ಷಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಗ್ರಾಮಸ್ಥರು ತೆಂಗಿನಕಾಯಿ ಒಡೆದು ಪ್ರಾರ್ಥನೆ ಸಲ್ಲಿಸಿ, ಕ್ಷೇತ್ರದ ಗೌರವವನ್ನು ಉಳಿಸಿಕೊಳ್ಳಲು ಪ್ರತಿಜ್ಞೆ ತೆಗೆದುಕೊಂಡರು. ಕಾರ್ಯಕ್ರಮವನ್ನು ಸಂದೇಶ್ ಗೌಡ ಸ್ವಾಗತಿಸಿ, ಪೃಥ್ವಿಶ್ ಗೌಡ ಕೆಂಬರ್ಜೆ ನಿರೂಪಿಸಿ, ರಾಜರಾಮ್ ವಂದಿಸಿದರು.