Site icon Suddi Belthangady

ಪತ್ನಿಗೆ ಕಿರುಕುಳ ನೀಡಿದ ಆರೋಪ: ಧರ್ಮಸ್ಥಳ ಠಾಣಾ ಎಸ್‌.ಐ. ಕಿಶೋರ್ ವಿರುದ್ಧ ಕೇಸು ದಾಖಲು

ಬೆಳ್ತಂಗಡಿ: ಪತ್ನಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಕಿಶೋರ್ ವಿರುದ್ಧ ಬೆಂಗಳೂರು ನಗರದ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ವರದಕ್ಷಿಣ ಕಿರುಕುಳ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಬೆಂಗಳೂರು ನಗರದ ನಾಗರಬಾವಿ ಸರ್ಕಲ್‌ನ ಟೀಚರ್ಸ್ ಕಾಲೋನಿಯ ಮಾನಸ ನಗರದ 2ನೇ ಅಡ್ಡ ರಸ್ತೆಯ ನಿವಾಸಿಯಾಗಿರುವ ಸಂತ್ರಸ್ತ ಮಹಿಳೆ ಬೆಂಗಳೂರಿನ ಚಂದ್ರ ಲೇಔಟ್ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಕಿಶೋರ್ ವಿರುದ್ಧ ವರದಕ್ಷಿಣೆ ಕಿರುಕುಳ ತಡೆ ಕಾಯ್ದೆ 1961 ಮತ್ತು ಭಾರತೀಯ ನ್ಯಾಯ ಸಂಹಿತೆ 2003ರ ಸೆಕ್ಷನ್ 109, 115(2), 118(1), 3(5), 351(3), 352, 85ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ತಂದೆ ತಾಯಿಗೆ ಏಕೈಕ ಪುತ್ರಿಯಾಗಿರುವ 27 ವರ್ಷ ಪ್ರಾಯದ ಸಂತ್ರಸ್ತ ಮಹಿಳೆಗೆ ಸಹೋದರ ಸಹೋದರಿ ಯಾರೂ ಇಲ್ಲ. ಮಹಿಳೆಯ ತಂದೆ ವ್ಯಾಪಾರಸ್ಥರಾಗಿದ್ದಾರೆ. ತಾಯಿ ಗೃಹಿಣಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ವಾಸವಾಗಿರುವ ಸರಸ್ವತಮ್ಮ ಮತ್ತು ಪುಟ್ಟ ಚನ್ನಪ್ಪ ಅವರ ಮಗನಾದ ಮೂಡಿಗೆರೆಯಲ್ಲಿ ಸಬ್‌ಇನ್ಸ್‌ಪೆಕ್ಟರ್ ಆಗಿದ್ದ ಕಿಶೋರ್ ಪಿ. ಅವರೊಂದಿಗೆ ಸಂತ್ರಸ್ತೆ ವಿವಾಹವಾಗಿದ್ದಾರೆ.

ವಿವಾಹವಾದ ಬಳಿಕ ಪ್ರಸ್ತುತ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಎಸ್‌.ಐ ಆಗಿರುವ ಕಿಶೋರ್ ಅವರು ತನ್ನ ಪತ್ನಿಗೆ ವರದಕ್ಷಿಣೆ ಕಿರುಕುಳ ಕೊಟ್ಟು ಅವಾಚ್ಯ ಶಬ್ಧಗಳಿಂದ ನಿಂದಿಸಿ, ದೈಹಿಕವಾಗಿ ಹಲ್ಲೆ ಮಾಡಿ ಮಾನಸಿಕವಾಗಿ ಹಿಂಸಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

Exit mobile version