Site icon Suddi Belthangady

ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ನೂತನ ಉತ್ಪಾದನಾ ಸಂಕೀರ್ಣದಲ್ಲಿ ಪೂಜಾ ಕಾರ್ಯಕ್ರಮ

ಉಜಿರೆ: ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ  ಸಂಸ್ಥೆ ವತಿಯಿಂದ ಬೆಳ್ತಂಗಡಿಯ ರೆಂಕೆದಗುತ್ತುವಿನಲ್ಲಿ ನಿರ್ಮಾಣವಾದ ನೂತನ ಉತ್ಪಾದನಾ ಸಂಕೀರ್ಣದ ವೈದಿಕ, ಧಾರ್ಮಿಕ ಪೂಜಾ ಸಮಾರಂಭವು ಮಾ. 20ರಂದು ಸುರತ್ಕಲ್ಲಿನ ವೇದಮೂರ್ತಿ ನಾಗೇಂದ್ರ ಗುರೂಜಿ ಅವರ ನೇತೃತ್ವದಲ್ಲಿ ಗಣ ಹವನ ಹಾಗು ಚಂಡಿಕಾ ಹವನ ಧಾರ್ಮಿಕ ಪೂಜಾ ವಿಧಿಗಳು ನಡೆಯಿತು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಸ್ಥಾಪಕಾಧ್ಯಕ್ಷ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು  ಮಾತನಾಡಿ ಗ್ರಾಮೀಣ ಉದ್ಯೋಗ ಮತ್ತು ಉತ್ಪಾದನೆ ದೃಷ್ಟಿಯಲ್ಲಿ ಆರಂಭಗೊಂಡ ಸಿರಿ ಸಂಸ್ಥೆ ಇಂದು ಉತ್ತಮ ಗುಣಮಟ್ಟದ ವಸ್ತುಗಳನ್ನು ತಯಾರಿಸಿ ರಾಜ್ಯಾದ್ಯಂತ ವಿತರಿಸಿ ಜನಪ್ರಿಯತೆ ಗಳಿಸುತ್ತಿರುವುದು ಶ್ಲಾಘನೀಯ.

ಸಿಬ್ಬಂದಿಗಳು ಇದು ನಮ್ಮದೇ ಸಂಸ್ಥೆ ಎಂಬ ಭಾವನೆಯಿಂದ ಪ್ರಾಮಾಣಿಕವಾಗಿ ದುಡಿಯುತ್ತ  ಇಲ್ಲಿಯ ಸುವ್ಯವಸ್ಥೆಗಳನ್ನು ಬಳಸಿಕೊಂಡು ಮುನ್ನಡೆಯಬೇಕು. ಕೆಟ್ಟ ಶಕ್ತಿ,ದುಷ್ಟ ಶಕ್ತಿಗಳ ಪ್ರವೇಶ ತಡೆಯಲು ಧಾರ್ಮಿಕ  ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದರು.ಅಪರೂಪದ ವಿಚಾರಗಳು ,ಪ್ರತಿಭೆಗಳು ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟಿವೆ ಎಂಬುದು ಸಿರಿ ಸಂಸ್ಥೆಯಿಂದ ಸಾಬೀತಾಗಿದೆ.  ಉತ್ತಮ ಗುಣಮಟ್ಟ,ಮಿತ ದರದಲ್ಲಿ ವಸ್ತುಗಳನ್ನು  ಜನಸಾಮಾನ್ಯರಿಗೆ ಒದಗಿಸುವ ಧ್ಯೇಯದೊಂದಿಗೆ ಸಂಸ್ಥೆಯು ಮುನ್ನುಗ್ಗುತ್ತಿದೆ. ಎಂದರು.
         

ಹೇಮಾವತಿ ವೀ. ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್, ಸೋನಿಯಾ ವರ್ಮ, ಪೂರನ್ ವರ್ಮ, ಎಸ್ ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಸಿರಿ ಸಂಸ್ಥೆಯ ನಿರ್ದೇಶಕ ರಾಜೇಶ್ ಪೈ , ನೂತನ ಕಟ್ಟಡದ ಇಂಜಿನೀಯರ್ ಸಂಪತ್ ರತ್ನ ರಾವ್ ,ಶಿಕ್ಷಣ ಸಂಸ್ಥೆ,ರುಡ್ ಸೆಟ್, ಗ್ರಾಮಾಭಿವೃದ್ಧಿ ಯೋಜನೆ  ಮತ್ತಿತರ ಸಂಘ ಸಂಸ್ಥೆಗಳ ಮುಖ್ಯಸ್ಥರು ಹಾಗು ಸಿರಿ ಸಂಸ್ಥೆಯ ಸಿಬ್ಬಂದಿ ವರ್ಗ ಮತ್ತು ಆಮಂತ್ರಿತ ಗಣ್ಯರು  ಉಪಸ್ಥಿತರಿದ್ದರು.

ಸಂಸ್ಥೆಯ  ಕಾರ್ಯನಿರ್ವಾಹಕ ನಿರ್ದೇಶಕ  ಕೆ.ಎನ್. ಜನಾರ್ದನ್ ಸ್ವಾಗತಿಸಿ, ಪ್ರಸ್ತಾವಿಸಿ, ಜೀವನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳ  ಪರವಾಗಿ ಡಾ!ಹೆಗ್ಗಡೆ ಹಾಗು ಹೇಮಾವತಿ ಹೆಗ್ಗಡೆಯವರನ್ನು ಗೌರವಿಸಲಾಯಿತು. ಉದ್ಯಮಿ ಬಸವರಾಜ್ ಅವರು ಸಂಚಾರಿ ವಾಹನದ ಕೀಲಿಯನ್ನು ಸಿರಿ ಸಂಸ್ಥೆಗೆ ಹಸ್ತಾಂತರಿಸಿದರು. 

ಸಾವಿರಾರು ಜನರಿಗೆ ಉದ್ಯೋಗ ನೀಡುತ್ತಿರುವ ಸಿರಿ ಸಂಸ್ಥೆಯ ವಿಸ್ತೃತ ಕಟ್ಟಡ 1,53,000 ಚದರ ಅಡಿಗಳಿಗಿಂತ ಅಧಿಕ ವಿಸ್ತೀರ್ಣ ಹೊಂದಿದೆ. ಎಲ್ಲಾ ಸೌಲಭ್ಯ ಒಂದೇ ಸೂರಿನಡಿ  ಅತ್ಯಾಧುನಿಕ  ಟೆಕ್ಸ್ ಟೈಲ್ ಮೆಶಿನ್, ಗೋದಾಮು, ಕಚೇರಿ, ಕ್ಯಾಂಟೀನ್, ಹಾಸ್ಟೆಲ್, ಶಿಶುವಿಹಾರ, 30ಕ್ಕೂ ಅಧಿಕ ವಾಹನಗಳ ದುರಸ್ತಿಗಾಗಿ ಗ್ಯಾರೇಜ್ ಸಹಿತ ನಾನಾ ವಸ್ತುಗಳ ಉತ್ಪಾದನಾ ವಿಭಾಗಗಳಿವೆ. 20 ಕೋಟಿ ರೂ.ಗಿಂತ ಅಧಿಕ ಮೌಲ್ಯದ ಸುಸಜ್ಜಿತ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ವಾರ್ಷಿಕ 32ಕೋಟಿ ರೂ. ವ್ಯವಹಾರ ನಡೆಸುತ್ತಿರುವ ಸಂಸ್ಥೆ ಈಗಾಗಲೇ 13 ಪ್ರತಿಷ್ಠಿತ ಕಂಪೆನಿಗಳ ಜತೆ ಒಪ್ಪಂದವನ್ನು ಮಾಡಿಕೊಂಡಿದೆ. -ಕೆ. ಎನ್. ಜನಾರ್ದನ್ .ಎಂ.ಡಿ.  ಸಿರಿ ಸಂಸ್ಥೆ.

Exit mobile version