ಬೆಳ್ತಂಗಡಿ: ಮೂಡಬಿದಿರೆಯ ಚಿನ್ನಾಭರಣ ಮಳಿಗೆಯೊಂದರಿಂದ 2 ಉಂಗುರಗಳನ್ನು ಕದ್ದ ಆರೋಪದಲ್ಲಿ ಕಲ್ಮಂಜ ಗ್ರಾಮದ ಪಾಳ್ಯ ನಿವಾಸಿ ರಮೇಶ್ ಲಿಂಗಾಯಿತ ಎಂಬಾತನನ್ನು ಮಾ. 3ರಂದು ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಅಲಂಕಾರ್ ಜ್ಯುವೆಲ್ಲರ್ಸ್‌ಗೆ ಗ್ರಾಹಕನಂತೆ ಪ್ರವೇಶಿಸಿದ ರಮೇಶ್ ಕಳವು ನಡೆಸಿದ ಕೃತ್ಯ ಇನ್ನೊಬ್ಬ ಗ್ರಾಹಕರ ಗಮನಕ್ಕೆ ಬಂದಿದ್ದು ರಮೇಶ ಅಲ್ಲಿಂದ ಹೊರಗೆ ಹೋದ ತಕ್ಷಣ ಅಂಗಡಿಯವರಿಗೆ ಗ್ರಾಹಕ ಮಾಹಿತಿ ನೀಡಿದರು. ಕೂಡಲೇ ರಮೇಶನನ್ನು ಬೆನ್ನತ್ತಿದ ಮಳಿಗೆಯ ಸಿಬ್ಬಂದಿ ಕಳ್ಳ ಕಳ್ಳ ಎಂದು ಬೊಬ್ಬೆ ಹಾಕಿದಾಗ ಸಾರ್ವಜನಿಕರು ರಮೇಶನನ್ನು ಬೆನ್ನಟ್ಟಿ ಹಿಡಿದರು.
ಬಳಿಕ ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದರು. ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸಿದ್ದಾರೆ. ಈತ ಕಲ್ಮಂಜ ಗ್ರಾಮದ ನ್ಯಾಯಬೆಲೆ ಅಂಗಡಿಯಿಂದ ಅಕ್ಕಿ ಕಳವು ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದ್ದು ಮುಂಡಾಜೆ ಗ್ರಾಮದ ಕೋಳಿ ಅಂಗಡಿಯಿಂದ ಹಣ ಕಳವಿಗೆ ಯತ್ನಿಸಿರುವುದು, ಚಾರ್ಮಾಡಿಯ ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನಿಸಿರುವುದು, ಉಜಿರೆಯಲ್ಲಿ ನಿಂಬೆಹಣ್ಣು ಕಳ್ಳತನ ಮಾಡಿರುವುದು, ಮದುವೆ ಸಮಾರಂಭದಲ್ಲಿ ಮದ್ಯ ಕಳ್ಳತನ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ತಿಳಿದು ಬಂದಿದೆ.