ಪಡಂಗಡಿ: ಗ್ರಾ. ಪಂ. ಮಹಿಳಾ ಗ್ರಾಮಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರುಗಿತು.
ಬೆಳ್ತಂಗಡಿ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕಿ ಉಷಾ ಕಾಮತ್ ಮಹಿಳೆಯರ ಕೌಟುಂಬಿಕ ದೌರ್ಜನ್ಯದ ಬಗ್ಗೆ, ಮಹಿಳೆಯರ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣದ ಬಗ್ಗೆ ಸುದೀರ್ಘವಾದ ಮಾಹಿತಿಯನ್ನು ನೀಡಿದರು.
ಮಹಿಳೆಯರ ಅಪೌಷ್ಠಿಕತೆ ಮತ್ತು ರಕ್ತಹೀನತೆ ಮತ್ತು ರಕ್ಷಣೆ ವಿಷಯದ ಬಗ್ಗೆ ಪಡಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಸಂಧ್ಯಾ ಮಾಹಿತಿಯನ್ನು ನೀಡಿದರು.
ಗ್ರಾಮ ಪಂಚಾಯತ್ ಉಪಾದ್ಯಕ್ಷೆ ವಸಂತಿ, ಸದಸ್ಯೆ ಮೀನಾಕ್ಷಿ ಮಹಿಳೆಯರು ಸರಕಾರದ ಯೋಜನೆಗಳನ್ನು ಸಮರ್ಥವಾಗಿ ಉಪಯೋಗಿಸಿಕೊಂಡು ಸ್ವಾವಲಂಬಿ ಜೀವನ ನಡೆಸುವಂತೆ ಕರೆ ನೀಡಿದರು.
ಪಡಂಗಡಿ ಗ್ರಾಮ ಪಂಚಾಯತಿಯ ಸಮಗ್ರ ಸ್ವಚ್ಛತೆಗೆ ಅಹಿರ್ನಿಶಿಯಾಗಿ ದುಡಿಯುತ್ತಿರುವ ಮಹಿಳಾ ಸ್ವಚ್ಛಾಗ್ರಹಿಗಳಾದ ಕುಸುಮಾವತಿ, ಯಮುನಾ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಹಾಗೂ ಇವರಿಗೆ ಸಮವಸ್ತ್ರವನ್ನು ವಿತರಿಸಲಾಯಿತು.
ಸಭೆಯಲ್ಲಿ ಗ್ರಾಮ ಪಂಚಾಯತಿಯ ಸದಸ್ಯರಾದ ಸಂತೋಷ್ ಕುಮಾರ್ ಜೈನ್, ರಿಚರ್ಡ್ ಗೋವಿಯಸ್, ಹಾಮದ್ ಬಾವಾ, ಶಕುಂತಳಾ, ವನಜಾಕ್ಷಿ, ಸುಮತಿ ಪಿ ಮತ್ತು ಶುಭಾ ಪಾಲ್ಗೊಂಡಿದ್ದರು.
ಆಶಾ ಕಾರ್ಯಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಂಥಾಲಯ ಮೇಲ್ವಿಚಾರಕಿ, ಸಿರಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಜಯಲಕ್ಷ್ಮೀ ಹಾಗೂ ಪದಾಧಿಕಾರಿಗಳು ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಪಾಲ್ಗೊಂಡ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಫನಾ ಪ್ರಾಸ್ತಾವಿಕವಾಗಿ ಮಾತನಾಡಿ ಮಹಿಳೆಯರು ಉತ್ತಮ ಹವ್ಯಾಸಗಳಲ್ಲಿ ತೊಡಗಿಸಿಕೊಂಡು ಸ್ವಸ್ಥ ಸಮಾಜದ ಪರಿವರ್ತನೆಗೆ ತೊಡಗಿಸಿಕೊಳ್ಳುವಂತೆ ಹೇಳಿ ಧನ್ಯವಾದವಿತ್ತರು.