ಬೆಳ್ತಂಗಡಿ: ಮಾ.14ರಂದು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘ (ನಿ.), ಉಜಿರೆ ಇದರ ಮಾಜಿ ಉಪಾಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರು ದಿ| ಪದ್ಮನಾಭ ಎನ್. ಮಾಣಿಂಜ ಇವರು ಸಂಘಕ್ಕೆ ನೀಡಿದ ಮಾರ್ಗದರ್ಶಕ ಸೇವೆಯನ್ನು ಸ್ಮರಿಸಿ ನುಡಿನಮನ ಕಾರ್ಯಕ್ರಮವನ್ನು ಸಂಘದ ದಿ| ಜಿ.ಎನ್. ಭಿಡೆ ಸಭಾಭವನದಲ್ಲಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಶ್ರೀಧರ ಜಿ ಭಿಡೆ ಮಾತನಾಡಿ, ಮಿತಭಾಷಿಯಾಗಿದ್ದ ಇವರು ಸರಕಾರಿ ಉನ್ನತ ಸೇವೆಯ ಅನುಭವವನ್ನು ಸಂಘಕ್ಕೆ ಅನೇಕ ಅವಧಿಗೆ ಉಪಾಧ್ಯಕ್ಷರಾಗಿ ಮತ್ತು ನಿರ್ದೇಶಕರಾಗಿ ನೀಡಿದ್ದರು ಹಾಗು ಸಮಾಜದಲ್ಲಿ ಉನ್ನತ ಗೌರವಕ್ಕೆ ಪಾತ್ರರಾಗಿದ್ದರು ಎಂದು ನೆನಪಿಸಿಕೊಂಡರು.
ಉಪಾಧ್ಯಕ್ಷರಾದ ಎಂ. ಅನಂತ ಭಟ್ ಇವರು ದಿ|ಪದ್ಮನಾಭ ಎನ್. ಮಾಣಿಂಜರವರ ಕಾರ್ಯಸಾಧನೆಯಲ್ಲಿನ ಧೀಮಂತಿಕೆಯನ್ನು ಮತ್ತು ಒಡನಾಟ ನೆನಪಿಸಿಕೊಂಡು ಗೌರವ ಸಮರ್ಪಿಸಿದರು.
ಮುಖ್ಯಕಾರ್ಯನಿರ್ವಾಹಣಾಧಿಕಾರಿ ರಾಜು ಶೆಟ್ಟಿಯವರು ಕಾರ್ಯಕ್ರಮ ನಿರ್ವಹಿಸಿ ಸಂಘದಲ್ಲಿ ಆರಂಭ ದಿನಗಳಲ್ಲೇ ಸದಸ್ಯರಾಗಿದ್ದ ದಿ| ಪದ್ಮನಾಭ ಎನ್. ಮಾಣಿಂಜರವರು ಸಂಘದಲ್ಲಿ 2005 ರಿಂದ 2020 ರ ಅವಧಿಗೆ ಉಪಾಧ್ಯಕ್ಷರಾಗಿ ಹಾಗು 1996 ರಿಂದ ಈವರೆಗೂ ಆಡಳಿತ ಮಂಡಳಿಯಲ್ಲಿ ನಿರ್ದೇಶಕರಾಗಿ ಸಂಘದ ಬೆಳವಣಿಗೆಯಲ್ಲಿ ದೊಡ್ಡ ಪಾತ್ರವಹಿಸಿದವರು ಎಂದು ನೆನೆದು ನುಡಿನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರುಗಳಾದ ಜಯಶ್ರೀ ಡಿ.ಎಂ., ಗ್ರೇಸಿಯನ್ ವೇಗಸ್, ಸೋಮನಾಥ ಬಂಗೇರ, ಕೆ.ಜೆ. ಅಗಸ್ಟಿನ್, ವಿ.ವಿ. ಅಬ್ರಾಹಂ, ಬಾಲಕೃಷ್ಣ ಗೌಡ ಕೆ., ಅಬ್ರಾಹಂ ಬಿ.ಎಸ್., ಶಶಿಧರ ಡೋಂಗ್ರೆ, ರಾಮ ನಾಯ್ಕ, ಬೈರಪ್ಪ, ಆರ್. ಸುಭಾಷಿಣಿ ಹಾಗೂ ಸಂಘದ ಸಿಬ್ಬಂದಿ ವರ್ಗ ಭಾಗವಹಿಸಿ ಭಾವಚಿತ್ರಕ್ಕೆ ಗೌರವ ಸಮರ್ಪಿಸಿದರು.