Site icon Suddi Belthangady

ತ್ಯಾಗ, ಕ್ಷಮಾದಾನ, ಪ್ರೀತಿ, ವಾತ್ಸಲ್ಯ ಗುಣದ ಬೃಹತ್ ಮೂರ್ತಿ ಮಹಿಳೆ: ಚೈತ್ರ

ಉಜಿರೆ: ಮಾರ್ಚ 10: ಮಹಿಳೆಯರನ್ನು ಎಲ್ಲಿ ಗೌರವಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ. ತ್ಯಾಗ, ಕ್ಷಮಾದಾನ, ಪ್ರೀತಿ, ವಾತ್ಸಲ್ಯ ಗುಣವನ್ನು ಹೊಂದಿರುವ ಬೃಹತ್ತಾದ ಮೂರ್ತಿ ಮಹಿಳೆ ಎಂದು ಉಜಿರೆಯ ಎಸ್.ಡಿ.ಎಂ. ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಚೈತ್ರ ಹೇಳಿದರು.

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಐ.ಟಿ.ಐ.ಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು.

“ನಮಗೆ ಕಾಣುವ ಮೊದಲ ಶ್ರೇಷ್ಠ ಮಹಿಳೆ ತಾಯಿ. ಅವಳು ನಮಗೆ ಮಾತೆಯಾಗಿ, ನಮ್ಮ ತಂದೆಗೆ ಸಹಧರ್ಮಿಣಿಯಾಗಿ, ಅವರ ಹೆತ್ತವರಿಗೆ ಮಗಳಾಗಿ, ಅಣ್ಣನಿಗೆ ತಂಗಿಯಾಗಿ, ತಮ್ಮನಿಗೆ ಅಕ್ಕನಾಗಿ ವಿವಿಧ ಜವಾಬ್ದಾರಿ ನಿರ್ವಹಿಸುತ್ತಾಳೆ. ಅಲ್ಲದೆ, ಭಾರತೀಯ ಮಹಿಳೆ ಎಲ್ಲಿ ಹೋರಾಟ ಮಾಡಬೇಕೋ ಅಲ್ಲಿ ಹೋರಾಡುವ ಗುಣ ಹೊಂದಿರುವವಳು. ಇಂತಹ ಮಹಿಳೆಯನ್ನು ಗುರುತಿಸಿ ಗೌರವಿಸುವ ದಿನ ಈ ಮಹಿಳಾ ದಿನ” ಎಂದರು.

“ಈ ಸಂಸ್ಥೆಯಲ್ಲಿ ಅದರಲ್ಲೂ ವಿಶೇಷವಾಗಿ ಮಹಿಳೆಯರೇ ಇರುವ ಈ ಸಂಸ್ಥೆಯಲ್ಲಿ ಮಹಿಳಾ ಸಬಲೀಕರಣಕ್ಕಾಗಿ ವಿಶೇಷ ಕಾರ್ಯಕ್ರಮ ನೀಡುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡುವ ನಮ್ಮೆಲ್ಲರ ಆದರ್ಶ ಮಾತೆ ಡಾ. ಹೇಮಾವತಿ ವೀ. ಹೆಗ್ಗಡೆ ಅವರು ಈ ಸಂಸ್ಥೆಯ ವಿದ್ಯಾರ್ಥಿನಿಯರ ಬೆಳವಣಿಗೆಗಾಗಿ ಎಲ್ಲಾ ರೀತಿಯ ಪ್ರೋತ್ಸಾಹ ನೀಡುತ್ತಿದ್ದಾರೆ. ಅಲ್ಲದೆ ಸಿರಿ ಗ್ರಾಮೋದ್ಯೋಗ ಸಂಸ್ಥೆ ಹಾಗೂ ಎಸ್.ಕೆ.ಡಿ.ಆರ್.ಡಿ.ಪಿ. ಸಂಸ್ಥೆಯ ಮೂಲಕ ಸಮಾಜದ ಬಡ ಮಹಿಳೆಯರ ಆರ್ಥಿಕ ಸಬಲೀಕರಣದ ರೂವಾರಿಯಾಗಿ ಕೆಲಸ ಮಾಡುವ ಜವಾಬ್ದಾರಿಯುತ ಸ್ಥಾನದಲ್ಲಿ ಉತ್ತಮ ಭಾರತ ಕಟ್ಟುವ ಕೆಲಸವನ್ನು ಅವರು ಮಾಡುತ್ತಿದ್ದಾರೆ” ಎಂದು ಅವರು ಹೇಳಿದರು.

ವಿದ್ಯಾರ್ಥಿನಿ ಅಶೂರಾ ಅವರು ಸಾರ್ಥಕ ಜೀವನ ನಡೆಸಿದ ಪ್ರಥಮ ಮಹಿಳೆಯರ ಪಟ್ಟಿಯನ್ನು ವಾಚಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್ ಉಪಸ್ಥಿತರಿದ್ದರು. ಅಫೀಜಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಆಯಿಷತ್ ನಸೀಹಾ ವಂದಿಸಿದರು.

Exit mobile version