Site icon Suddi Belthangady

ಅನೀಶ್‌ ನಿರ್ದೇಶನದ ದಸ್ಕತ್‌ ತುಳು ಸಿನಿಮಾಕ್ಕೆ ಪ್ರಶಸ್ತಿಯ ಗೌರವ

ಬೆಳ್ತಂಗಡಿ: ಬೆಂಗಳೂರಿನಲ್ಲಿ ಶನಿವಾರ ಮುಕ್ತಾಯಗೊಂಡ 16ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅನೀಶ್‌ ಅಮೀನ್‌ ನಿರ್ದೇಶನದ ದಸ್ಕತ್‌ ಚಿತ್ರವು ಕನ್ನಡ ಚಿತ್ರಗಳೊಂದಿಗೆ ಪೈಪೋಟಿ ನಡೆಸಿ ಪ್ರಶಸ್ತಿಯನ್ನು ಬಾಚಿಕೊಂಡಿದೆ.

ಕನ್ನಡ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಈ ಬಾರಿ ತುಳು ಭಾಷೆಯ ಚಿತ್ರಗಳು ಪ್ರಾಬಲ್ಯ ಮೆರೆದವು. ಒಟ್ಟು ಮೂರು ಪ್ರಶಸ್ತಿಗಳ ಪೈಕಿ ಎರಡು ಪ್ರಶಸ್ತಿಗಳನ್ನು ತುಳು ಚಿತ್ರಗಳೇ ಪಡೆದಿರುವುದು ವಿಶೇಷ.

ಮನೋಹರ ಕೆ‌. ನಿರ್ದೇಶನದ, ಪೃಥ್ವಿ ಕೊಣನೂರು ನಿರ್ಮಿಸಿದ ಮಿಕ್ಕ ಬಣ್ಣದ ಹಕ್ಕಿ ಸಿನಿಮಾ ಕನ್ನಡ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆಯಿತು. ಸಂತೋಷ್ ಮಾಡ ನಿರ್ದೇಶನದ, ಸುರೇಶ್‌ ಕೆ. ನಿರ್ಮಾಣದ ಪಿದಾಯಿ ತುಳು ಚಿತ್ರ ಹಾಗೂ ಅನೀಶ್‌ ಪೂಜಾರಿ ನಿರ್ದೇಶನದ, ರಾಘವೇಂದ್ರ ಕೆ. ನಿರ್ಮಾಣದ ದಸ್ಕತ್ ತುಳು ಸಿನಿಮಾಗಳು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದವು.

ವಿಜೇತ ಸಿನಿಮಾಗಳಿಗೆ ಕ್ರಮವಾಗಿ ₹10, ₹5 ಹಾಗೂ ₹2 ಲಕ್ಷ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ಕೃಷ್ಣೇಗೌಡ ಅವರು ನಿರ್ದೇಶಿಸಿದ ಲಚ್ಚಿ ನೆಟ್‌ಪ್ಯಾಕ್‌ ಜ್ಯೂರಿ ಪ್ರಶಸ್ತಿಗೆ ಭಾಜನವಾಯಿತು.

ಕನ್ನಡ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಒಟ್ಟು ಹದಿನಾಲ್ಕು ಸಿನಿಮಾಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು. ಎರಡು ತುಳು ಸಿನಿಮಾಗಳು ಪ್ರಶಸ್ತಿ ಪಡೆದಿರುವುದು ಇದೇ ಮೊದಲು.

Exit mobile version