Site icon Suddi Belthangady

ಬೆಳ್ತಂಗಡಿ: ಸ್ಪರ್ಶ ಕಾರ್ಯಕ್ರಮ ಮೂಲಕ ಮಾದರಿಯಾದ ಬಂಟರ ಮಹಿಳಾ ವಿಭಾಗ

ಬೆಳ್ತಂಗಡಿ: ಪ್ರಸ್ರುತ ಕಾಲಮಾನದಲ್ಲಿ ಅಪ್ರಾಪ್ತ ಹೆಣ್ಣುಮಕ್ಕಳು ಎದುರಿಸುತ್ತಿರುವ ದೈಹಿಕ ಹಾಗೂ ಲೈಂಗಿಕ ದೌರ್ಜನ್ಯದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೆಳ್ತಂಗಡಿಯ ಬಂಟರ ಮಹಿಳಾ ವಿಭಾಗ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಹಿಳಾ ದಿನಾಚರಣೆ ಅಂಗವಾಗಿ ಧರ್ಮಸ್ಥಳದ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯಲ್ಲಿ ಮಾ.5ರಂದು ‘ಸ್ಪರ್ಶʼ ಹೆಣ್ಣು ಮಕ್ಕಳ ಜಾಗೃತಿ ಅನ್ನುವ ಕಾರ್ಯಕ್ರಮ ನೆರವೇರಿತು. ಆಳ್ವಾಸ್‌ ವೆಲ್‌ ನೆಸ್‌ ಸೆಂಟರ್‌ನ ನಿರ್ದೇಶಕ ಡಾ. ದೀಪಾ ಕೊಠಾರಿ ಅವರು ಮಕ್ಕಳಿಗೆ ಒಳ್ಳೆಯ ಸ್ಪರ್ಶ, ಅಪಾಯದ ಸ್ಪರ್ಶ, ಯಾವ ಸನ್ನಿವೇಶದಲ್ಲಿ ಯಾವ ಭಾವನೆ ಸೃಷ್ಟಿಯಾಗುತ್ತದೆ ಅನ್ನುವುದರ ಕುರಿತಾಗಿ ಪರಿಣಾಮಕಾರಿ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಧರ್ಮಸ್ಥಳದ ಉನ್ನತೀಕರಿಸಿದ ಹಿ.ಪ್ರಾ.ಶಾಲೆ ಮುಖ್ಯ ಶಿಕ್ಷಕಿ ಪುಷ್ಪಾ ಎನ್‌, ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಚಂದ್ರಾವತಿ ಗೌಡ, ಉಜಿರೆ ವಲಯ ಬಂಟರ ಸಂಘದ ಅಧ್ಯಕ್ಷೆ ವನಿತಾ ಶೆಟ್ಟಿ, ಬಂಟರ ಮಹಿಳಾ ವಿಭಾಗದ ಉಪಾಧ್ಯಕ್ಷೆ ಸಂಗೀತಾ ಶೆಟ್ಟಿ, ಕಾರ್ಯದರ್ಶಿ ಶ್ರೇಯಾ ಶೆಟ್ಟಿ, ಕೋಶಾಧಿಕಾರಿ ರಕ್ಷಿತಾ ಶೆಟ್ಟಿ, ನಿರ್ದೇಶಕರುಗಳಾದ ಸಂಸ್ಕೃತಿ ಶೆಟ್ಟಿ, ವಿಂದ್ಯಾ ಶೆಟ್ಟಿ, ಪವಿತ್ರಾ ಶೆಟ್ಟಿ, ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಭಾಧ್ಯಕ್ಷತೆ ವಹಿಸಿದ್ದ ಬಂಟರ ಮಹಿಳಾ ವಿಭಾಗ ಅಧ್ಯಕ್ಷೆ ಜಯಲಕ್ಷ್ಮಿ ನವೀನ್‌ ಸಾಮಾನಿ ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನ್ನಾಡಿದರು. ನಿರ್ದೇಶಕಿ ಉಷಾ ಶೆಟ್ಟಿ ಕಾರ್ಯಕ್ರಮ ನಿರೂಪಣೆ ಮಾಡಿದರು.

ಕಾರ್ಯಕ್ರಮದ ಅಂಗವಾಗಿ ಕನ್ಯಾಡಿ‌ ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆ ಬಂ. ಮ. ವಿಭಾಗದಿಂದ ಪಾಯಸ ವ್ಯವಸ್ಥೆ ಕಲ್ಪಿಸಲಾಯಿತು.

Exit mobile version