Site icon Suddi Belthangady

ವಕ್ಫ್ ಕಾಯ್ದೆಗೆ ಅಸಂವಿಧಾನಿಕ ತಿದ್ದುಪಡಿ: ಕಕ್ಕಿಂಜೆಯಲ್ಲಿ 3 ಪಂಚಾಯತ್ ವ್ಯಾಪ್ತಿಯ ಮಸ್ಜಿದ್ ಗಳ ಜಂಟಿ ಪ್ರತಿಭಟನೆ

ಬೆಳ್ತಂಗಡಿ: ಕೇಂದ್ರ ಸರಕಾರ ಉದ್ಧೇಶಿರುವ ವಕ್ಫ್ ಕಾಯ್ದೆಗೆ ತಿದ್ದುಪಡಿ ಪ್ರಕ್ರಿಯೆಯನ್ನು ವಿರೋಧಿಸಿ ಮುಂಡಾಜೆ, ಚಾರ್ಮಾಡಿ, ನೆರಿಯ ಈ‌ಮೂರು ಗ್ರಾ.ಪಂ. ವ್ಯಾಪ್ತಿಯ ಎಲ್ಲಾ ಮಸ್ಜಿದ್‌ ಮತ್ತು ಮೊಹಲ್ಲಾಗಳ ಒಗ್ಗೂಡುವಿಕೆಯೊಂದಿಗೆ ಪ್ರತಿಭಟನಾ ಸಭೆಯು ಕಕ್ಕಿಂಜೆ ಪೇಟೆಯಲ್ಲಿ ಜರುಗಿತು.

ಇಲ್ಲಿನ‌ ಹಾರಿಸ್ ಹೊಟೇಲ್ ಬಳಿ‌ ಜಮಾಯಿಸಿದ ಹೋರಾಡಗಾರರು‌ ಸಾರ್ವಜನಿಕ ಸಭೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಅಸಂವಿಧಾನಿಕ ವಕ್ಫ್ ತಿದ್ದುಪಡಿ‌ಮಸೂದೆ ವಿರುದ್ಧ ವಾಟ್ಸ್ ಆಪ್ ಮೂಲಕ ರಚಿತವಾದ ಬಳಗದ ಸಂಯೋಜನೆಯಲ್ಲಿ ಈ ಹೋರಾಟ ಸಂಘಟಿಸಲಾಗಿತ್ತು.

ಇಸ್ಲಾಂ ನಲ್ಲಿ ವಕ್ಫ್ ಎಂದರೆ ಏನು? ವಕ್ಫ್ ಕಾಯ್ದೆಯ ತಿದ್ದುಪಡಿ ಹೇಗೇಗೆ ಆಯ್ತು, ಜಂಟಿ ಸದನ‌ಸಮಿತಿ ನಡೆದುಕೊಂಡ ರೀತಿಯ ಬಗ್ಗೆ ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ವಿಷಯ ಮಂಡಿಸಿದರು. ಕಾಯ್ದೆಯ ತಿದ್ದುಪಡಿಯ ಲೋಪಗಳೇನೇನು? ಕಾಯ್ದೆ ಬದಲಾವಣೆಯಲ್ಲಿ ಒಳಗೊಂಡಿರುವ ಅಸಂವಿಧಾನಿಕ ಅಂಶಗಳು ಏನೇನು? ಹಾಗೂ ಬದಲಾಗಲಿರುವ ಕಾಯ್ದೆಯಿಂದ ಆಗುವ ತೊಂದರೆಗಳು ಏನು ಎಂಬ ಬಗ್ಗೆ ಯುವ ನ್ಯಾಯವಾದಿ ನವಾಝ್ ಶರೀಫ್ ಅರೆಕ್ಕಲ್ ಮಾತನಾಡಿದರು.

ಸಾಮಾಜಿಕ ಕಾರ್ಯಕರ್ತ ಅಶ್ರಫ್ ಚಾರ್ಮಾಡಿ ಸ್ವಾಗತಿಸಿ ಪ್ರಸ್ತಾವನೆಗೈದರು. ಆರು ಜಮಾಅತ್ ಗಳ ಪದಾಧಿಕಾರಿಗಳು, ಧರ್ಮಗುರುಗಳು, ಜಮಾಅತ್ ಬಾಂಧವರು, ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.

ಬಳಿಕ ಕಕ್ಕಿಂಜೆ ಪೇಟೆಯ ಮೂಲಕ ಗ್ರಾ. ಪಂ. ಕಚೇರಿ ವರೆಗೆ ಜಾಥಾ ನಡೆಸಲಾಯಿತು. ಅಲ್ಲಿ ರಾಷ್ಟ್ರಪತಿ ಗಳಿಗೆ ಗ್ರಾ.ಪಂ ಪಿಡಿಒ‌ ಮೂಲಕ ಮನವಿ ಸಲ್ಲಿಸಲಾಯಿತು. ಕಾರ್ಯಕ್ರಮವನ್ನು ಕಬೀರ್ ಅರೆಕ್ಕಲ್ ನಿರೂಪಿಸಿದರು. ನಝೀರ್, ಶರೀಫ್ ಹೆಚ್. ಎ., ಹನೀಫ್ ಕೋಣೆ ಮೊದಲಾದವರು ನಾಯಕತ್ವ ವಹಿಸಿದ್ದರು. ಅಬ್ದುಲ್ ನಾಸಿರ್ ಕಲ್ಲಗುಡ್ಡೆ ವಂದಿಸಿದರು.

Exit mobile version