ಕೊಯ್ಯೂರು: ಸ. ಪ. ಪೂ. ಕಾಲೇಜು ಅಭಿವೃದ್ಧಿ ಕುರಿತು ಸಮಾಲೋಚನಾ ಸಭೆ ನಡೆಯಿತು. ಸಭೆಯನ್ನು ಉದ್ದೇಶಿಸಿ ಬೆಳಾಲು ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಅರಿಕೋಡಿ ಮಾತನಾಡಿ ಶ್ರದ್ಧಾ ಕೇಂದ್ರಗಳು ಮತ್ತು ಶಾಲೆಗಳ ಅಭಿವೃದ್ಧಿಯಾದರೆ ಊರಿನ ಅಭಿವೃದ್ಧಿಯಾದಂತೆ ” ಎಂಬುದಾಗಿ, ಸಂಸ್ಥೆಯ ಮೂಲಸೌಕರ್ಯ ಅಭಿವೃದ್ಧಿ ಮತ್ತು ಆವರಣ ಗೋಡೆ ಕಾಮಗಾರಿಯ ನಿರ್ವಹಣೆಗೆ ಸಂಪೂರ್ಣ ಸಹಕಾರ ನೀಡುವ ಬಗ್ಗೆ ವಾಗ್ದಾನ ಮಾಡಿದರು. ಅಲ್ಲದೇ ಮುoದಿನ ಶೈಕ್ಷಣಿಕ ವರ್ಷದಲ್ಲಿ ಕಾಲೇಜು ಪ್ರಾರಂಭೋತ್ಸವವನ್ನು ಗ್ರಾಮಸ್ಥರ ಸಹಕಾರದೊಂದಿಗೆ ಅದ್ದೂರಿಯಾಗಿ ನಡೆಸುವ ಬಗ್ಗೆ ಸಂಕಲ್ಪಗೈದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇನ್ನೋರ್ವ ಮುಖ್ಯ ಅತಿಥಿ ಬೆಂಗಳೂರಿನ ಉದ್ಯಮಿ ಕಿರಣ್ ಡಿ. ಪುಷ್ಪಗಿರಿ, ಉರುವಾಲು, ಮಾತನಾಡಿ ಸಂಸ್ಥೆಗೆ ಒಂದು ಸಭಾಂಗಣದ ಅವಶ್ಯಕತೆಯ ಬಗ್ಗೆ ಅಭಿಪ್ರಾಯ ಪಟ್ಟರು. ಅಂತೆಯೇ ಸಂಸ್ಥೆಯ ಅಭಿವೃದ್ಧಿಗಾಗಿ ಸರ್ವರೀತಿಯ ಸಹಕಾರದ ಭರವಸೆಯನ್ನಿತ್ತರು. ಗ್ರಾಮ ಪಂಚಾಯತ್ ಅಧ್ಯಕ್ಷೆ ದಯಾಮಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಗ್ರಾಮಪಂಚಾಯತ್ ಉಪಾಧ್ಯಕ್ಷ ಹರೀಶ್ ಬಜಿಲ, ಸದಸ್ಯರಾದ ಯಶವಂತ ಪೂರ್ಯಾಳ, ಹೇಮಾವತಿ ಕಡಮ್ಮಜೆ, ಕೊಯ್ಯೂರು ಪ್ರೌಢ ಶಾಲಾ ಮುಖ್ಯ ಶಿಕ್ಷಕ ರಾಧಾ ಕೃಷ್ಣ ತಚ್ಛಮೆ ಉಪಸ್ಥಿತರಿದ್ದರು. ಸಮಾಲೋಚನೆ ಸಭೆಯಲ್ಲಿ ಕೊಯ್ಯೂರು ಸಹಕಾರ ಸಂಘದ ನಿರ್ದೇಶಕರು, ಹಾಲು ಉತ್ಪಾದಕರ ಸಂಘದ ನಿರ್ದೇಶಕರುಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಪ್ರೌಢ ಶಾಲಾ ಶಿಕ್ಷಕ ವೃಂದ, ಪೋಷಕರು ಭಾಗವಹಿಸಿ ಸಂಸ್ಥೆಯ ಅಭಿವೃದ್ಧಿ ಬಗ್ಗೆ ಸಲಹೆ -ಸೂಚನೆಗಳನ್ನಿತ್ತರು.ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ದಿವ ಕೊಕ್ಕಡ ತಮ್ಮ ಅಭಿಪ್ರಾಯ ಮಂಡಿಸಿದರು.
ಕಾಲೇಜಿನ ಪ್ರಾಂಶುಪಾಲ ಮೋಹನ ಗೌಡ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಉಪನ್ಯಾಸಕ ಲಕ್ಷ್ಮಣ ಗೌಡ ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ದಾಮೋದರಗೌಡ ವಂದಿಸಿದರು.