ಉಜಿರೆ: ಎಸ್.ಡಿ.ಎಂ. ಕಾಲೇಜಿನ ಸಮುದಾಯ ಬಾನುಲಿ ಕೇಂದ್ರ ರೇಡಿಯೋ ನಿನಾದ 90.4 ಎಫ್.ಎಂ. ವತಿಯಿಂದ ಹಿರಿಯ ನಾಗರಿಕರಿಗಾಗಿ ‘ನಮ್ಮ ಹಿರಿಯರು ನಮ್ಮ ಗೌರವ’ ಮಾಹಿತಿ ಕಾರ್ಯಕ್ರಮವು ಮಾ.1ರಂದು ಬೆಳಾಲು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಭಾರತ ಸರ್ಕಾರ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್, ನವದೆಹಲಿ ಹಾಗೂ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ವಿಭಾಗದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ ಅವರು ಮಾತನಾಡಿ, “ಇಂದಿನ ದಿನಗಳಲ್ಲಿ ಹಿರಿಯ ನಾಗರಿಕರು ಹಲವಾರು ಶೋಷಣೆಗಳಿಗೆ ಒಳಗಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಹಾಯವಾಣಿಯ ಮಾಹಿತಿ ನೀಡುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ವೈವಿಧ್ಯ ಕಾರ್ಯಕ್ರಮ ಆಯೋಜಿಸಲಾಗುವುದು” ಎಂದರು.
ಸಂಪನ್ಮೂಲ ವ್ಯಕ್ತಿ, ರೇಡಿಯೋ ನಿನಾದ ಸಮುದಾಯ ಬಾನುಲಿ ಕೇಂದ್ರದ ಕಾರ್ಯಕ್ರಮ ಸಂಯೋಜಕ ವಿ.ಕೆ. ಕಡಬ ಅವರು, ಹಿರಿಯ ನಾಗರಿಕರ ಸಹಾಯವಾಣಿ, ಪಿಂಚಣಿ ಯೋಜನೆ ಕುರಿತಾಗಿ ಮಾಹಿತಿ ನೀಡಿದರು. ಅಲ್ಲದೆ ಹಿರಿಯ ನಾಗರಿಕರ ಜೊತೆ ಸಂವಾದ ನಡೆಸಿದರು.
ಮುಖ್ಯ ಅತಿಥಿ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ತಾರಾನಾಥ್ ನಾಯ್ಕ್ ಕೆ. ಅವರು ಮಾತನಾಡಿ, ಸರ್ಕಾರಿ ಸವಲತ್ತುಗಳನ್ನು ಗ್ರಾ.ಪಂ. ಮೂಲಕ ಪಡೆಯುವಂತೆ ಸಲಹೆ ನೀಡಿದರು.
ಎಸ್.ಡಿ.ಎಂ. ಸಮಾಜಕಾರ್ಯ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಪಲ್ಲವಿ ಸ್ವಾಗತಿಸಿ, ಸುಶಾಂತ್ ವಂದಿಸಿ, ಶ್ರೇಯಾ ನಿರೂಪಿಸಿದರು. ಪವನ್ ಮತ್ತು ಪ್ರಕೃತ್ ಎಸ್. ಕಾರ್ಯಕ್ರಮ ಸಂಯೋಜಿಸಿದರು.