ಬೆಳ್ತಂಗಡಿ: ಫೆ. 28ರಂದು ಸರಕಾರಿ ಪ್ರೌಢ ಶಾಲೆ ಗುರುವಾಯನಕೆರೆಯಲ್ಲಿ ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ ಮತ್ತು ಸರಕಾರಿ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು.
ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ವೈಜ್ಞಾನಿಕ ವಿಧಾನದಲ್ಲಿ ಕಾರ್ಯಕ್ರಮವನ್ನು ಗಣ್ಯ ಅತಿಥಿಗಳಾದ ಕಿರಣ್ ರಾಜ್ ಯುವ ಸಂಯೋಜಕರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಯಾಕುಬ್ ನಡ, ರಾಧಾಕೃಷ್ಣ ಕೊಯೂರು ಹಾಗೂ ಮುಖ್ಯ ಶಿಕ್ಷಕಿ ಪದ್ಮಲತಾ ಉದ್ಘಾಟಿಸಿದರು. ಕಿರಣ್ ರಾಜ್ ಕಾರ್ಯಕ್ರಮದ ಪ್ರಸ್ತಾವನೆಯನ್ನು ಮಾಡಿದರೆ, ಮುಖ್ಯ ಶಿಕ್ಷಕರು ಪ್ರತಿಜ್ಞಾವಿಧಿಯನ್ನು ಭೋದಿಸಿ, ಸರ್ವರನ್ನು ಸ್ವಾಗತಸಿದರು.
ವಿದ್ಯಾರ್ಥಿನಿ ಶ್ರೀಯ ಸಿ.ವಿ. ರಾಮನ್ ರವರ ಸಾಧನೆಯನ್ನು ಪರಿಚಯಿಸಿದರು. ಪೃಥ್ವಿ ಮತ್ತು ಅಂಕಿತಾ ರವರು ವೈಜ್ಞಾನಿಕ ಪ್ರಯೋಗಗಳನ್ನು ಮಾಡುವುದರ ಮೂಲಕ ಮಕ್ಕಳಲ್ಲಿ ಆಸಕ್ತಿ ಮೂಡಿಸಿದರು. ಜಯಶ್ರೀ ಮತ್ತು ಸಿಂಚನ ಮೆಗ್ನಿಷಿಯಂ ಉರಿಸುವಿಕೆಯನ್ನು ತೋರಿಸಿ ಜ್ವಲನ ತಾಪ ಹಾಗೂ ದಹನತೆಯನ್ನು ವಿವರಿಸಿದರು. 8ನೇ ತರಗತಿಯ ವಿದ್ಯಾರ್ಥಿನಿಯರು ವಿಜ್ಞಾನ ಗೀತೆಯನ್ನು ಹಾಡಿದರು. ಬಳಿಕ ಮಕ್ಕಳಿಗೆ ಲಘು ಪಾನೀಯ ಮತ್ತು ತಿಂಡಿ ನೀಡಲಾಯಿತು.
ಯಾಕುಬ್ ಸರ್ ವೈಜ್ಞಾನಿಕ ಚಿಂತನೆ ಮೂಡಿಸುವುದರ ಬಗ್ಗೆ ಮಾಹಿತಿ ನೀಡಿದರು. ರಾಮನ್ ರವರ ಬಾಲ್ಯ, ವಿದ್ಯಾಭ್ಯಾಸ, ಶೈಕ್ಷಣಿಕ ಸಾಧನೆ, ಬೆಳಕಿನ ಚದರಿಕೆಯ ಪ್ರಯೋಗಗಳನ್ನು ವಿವರಿಸಿದರು.
ಮುಂದುವರಿಯುತ್ತಾ ತಂಪು ಪಾನೀಯಗಳು ಮತ್ತು ಅವುಗಳಲ್ಲಿ ಬಳಸುವ ಹಾನಿಕಾರಕ ಅಂಶಗಳ ಬಗ್ಗೆ ಸವಿವರವಾದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ವಿಡಿಯೋ ಸಹಿತ ತೋರಿಸಿದರು. ಮಕ್ಕಳಲ್ಲಿ ತಂಪು ಪಾನೀಯಗಳಿಂದ ಉಂಟಾಗುವ ಕಾಯಿಲೆ ಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಅದ್ಭುತವಾಗಿ ನೆರವೇರಿಸಿದರು.
2ನೇ ಅವಧಿಯಲ್ಲಿ ರಾಧಾಕೃಷ್ಣ ಕೊಯ್ಯುರು ಇವರು ಮಕ್ಕಳಲ್ಲಿ ವೈಜ್ಞಾನಿಕ ತಳಹದಿಯನ್ನು ಬೆಳೆಸುವುದು, ಪ್ರೋತ್ಸಾಹಿಸುವುದು ಮತ್ತು ಅದನ್ನು ಬರವಣಿಗೆ ರೂಪದಲ್ಲಿ ತರುವ ಬಗ್ಗೆಮಾಹಿತಿಯನ್ನು ನೀಡಿದರು. ಜೊತೆಗೆ ಪರಿಸರ ಮತ್ತು ಸಸ್ಯಗಳ ಬಗ್ಗೆ ಸವಿವರವಾದ ಮಾಹಿತಿ ನೀಡಿದರು.
ಮಳೆ ನೀರಿನ ಕೊಲ್ಲು ಮತ್ತು ನೀರಿನ ಸಂರಕ್ಷಣೆಯ ಮಹತ್ವವನ್ನು ಉತ್ತಮವಾಗಿ ವಿವರಿಸಿದರು. ವಿಜ್ಞಾನ ಶಿಕ್ಷಕ ಯೋಗೀಶ್ ನಾಯಕ್ ನಿರ್ವಹಿಸಿದರು. ಎಲ್ಲಾ ಶಿಕ್ಷಕ ವೃಂದದವರು ಸಹಕರಿಸಿದರು. ಗಣಿತ ಶಿಕ್ಷಕ ಕುಶಾಲಪ್ಪ ವಂದಿಸಿದರು.