Site icon Suddi Belthangady

ಎ.1ರಿಂದ ಉಜಿರೆ ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಗ್ರಾಮ ಘೋಷಣೆ: ಗ್ರಾ. ಪಂ. ಸಾಮಾನ್ಯ ಸಭೆಯಲ್ಲಿ ಕಠಿಣ ನಿರ್ಧಾರ

ಉಜಿರೆ: ಏ. 1ನೇ ತಾರೀಕಿನಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಮತ್ತು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಗ್ರಾಮ ಉಜಿರೆಯನ್ನು ಅಧಿಕೃತವಾಗಿ ಘೋಷಿಸುವ ಕುರಿತು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಕಿರಣ್ ಅಧ್ಯಕ್ಷತೆಯಲ್ಲಿ ಜರುಗಿದ ಉಜಿರೆ ಸಾಮಾನ್ಯ ಸಭೆಯಲ್ಲಿ ಕಠಿಣ ನಿರ್ಧಾರವನ್ನು ಕೈಗೊಳ್ಳಲಾಯಿತು.

ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಹೋಟೆಲ್, ಅಂಗಡಿಗಳಿಗೆ ಮತ್ತು ಹೆಚ್ಚು ಕಸ ಉತ್ಪಾದನೆ ಮಾಡುವಂತಹ ಎಲ್ಲಾ ಅಂಗಡಿಗಳಿಗೆ ಏಕ ಬಳಕೆ ಪ್ಲಾಸ್ಟಿಕನ ಬಳಕೆಯನ್ನು ಕಡಿಮೆ ಮಾಡಿ, ಮರು ಬಳಕೆ ಮಾಡಬಹುದಾದ ಪ್ಲಾಸ್ಟಿಕ್/ ಬಟ್ಟೆ ಚೀಲಗಳನ್ನು ಬಳಸಲು ಸಾರ್ವಜನಿಕರಿಗೆ ಹಾಗು ಅಂಗಡಿ/ ಹೋಟೆಲ್ ಮಾಲಕರಿಗೆ ಸೂಚಿಸಲಾಗಿದೆ.

ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ಗಳನ್ನು ಬಳಸದೆ, ಬಟ್ಟೆಯ ಪ್ಯಾಡ್ / ಮುಟ್ಟಿನ ಕಪ್ ಗಳನ್ನು ಬಳಸಲು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ ಮತ್ತು ಮುಂದಿನ ದಿನಗಳಲ್ಲಿ ಸ್ಯಾನಿಟರಿ ಪ್ಯಾಡ್ ಗಳನ್ನೂ ನಿಷೇಧಿಸುವ ಕುರಿತಂತೆ ಮುಂದಿನ ದಿನಗಳಲ್ಲಿ ಕ್ರಮವಹಿಸಲು ತೀರ್ಮಾನಿಸಲಾಗಿರುತ್ತದೆ.

ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವು ವಸತಿ ಸಮುಚ್ಚಯಗಳು, ಮೆಸ್, ಹಾಸ್ಟೆಲ್ ಗಳಿಂದ ಸರಿಯಾಗಿ ಮೂಲದಲ್ಲೇ ಬೇರ್ಪಡಿಸದೆ ಕಸವನ್ನು ನೀಡುತ್ತಿರುವ ಬಗ್ಗೆ ಮತ್ತು ಹಲವು ವಸತಿ ಸಮುಚ್ಚಯದವರು ಕಸವನ್ನು ಸ್ವಚ್ಛ ವಾಹಿನಿ ಗಾಡಿಗೆ ನೀಡದೆ ರಸ್ತೆ ಬದಿಯಲ್ಲಿ ಎಸೆದು ಮಲಿನ ಮಾಡುತ್ತಿರುವ ಬಗ್ಗೆಯೂ ಸದಸ್ಯರು ದೂರನ್ನು ನೀಡಿದ್ದು, ಈ ಕುರಿತಂತೆ ಮುಂದಿನ ಹಂತವಾಗಿ ವಸತಿ ಸಮುಚ್ಚಯದ ಮಾಲೀಕರೊಂದಿಗೆ, ಮೆಸ್, ಪೇಯಿಂಗ್ ಗೆಸ್ಟ್, ಖಾಸಗಿ ಹಾಸ್ಟೆಲ್ ಮಾಲೀಕರೊಂದಿಗೆ ಸಮಾಲೋಚನಾ ಸಭೆಯನ್ನು ಮಾಡಿ, ಎಲ್ಲಾ ರೀತಿಯಲ್ಲೂ ಕಸವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಕುರಿತು ಮತ್ತು ಕಸ ಸಂಗ್ರಹಣೆಯನ್ನು 100ರಷ್ಟು ಹೆಚ್ಚಿಸುವ ಬಗ್ಗೆ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರುವ ಬ್ಲಾಕ್ ಸ್ಪಾಟ್ ಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಬಗ್ಗೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈ ಗೊಳ್ಳಲಾಗಿದೆ.

ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು, ಪಂಚಾಯತ್ ಸದಸ್ಯ ಉಪಸ್ಥಿತರಿದ್ದರು. ಪಂಚಾಯತ್ ಅಧಿಕಾರಿ ಪ್ರಕಾಶ್ ಶೆಟ್ಟಿ ಸ್ವಾಗತಿಸಿ ವಿವರ ನೀಡಿದರು. ಸಿಬ್ಬಂದಿ ವರ್ಗದವರು ಸಹಕರಿಸಿದರು. ಕಾರ್ಯದರ್ಶಿ ಶ್ರವಣ್ ಕುಮಾರ್ ವಂದಿಸಿದರು.

Exit mobile version