Site icon Suddi Belthangady

ಶಿರಸಿಯಲ್ಲಿ ಗಾಲಿಕುರ್ಚಿ ಜಾಥಾ

ಬೆಳ್ತಂಗಡಿ: ಸೇವಾಧಾಮ – ಸೇವಾಭಾರತಿ ಉತ್ತರ ಕನ್ನಡ ಜಿಲ್ಲೆ ಇದರ ಆಶ್ರಯದಲ್ಲಿ ಶಿರಸಿ ಸ್ಕ್ಯಾನ್ ಸೆಂಟರ್, ರೋಟರಿ ಕ್ಲಬ್ ಶಿರಸಿ ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಶಿರಸಿ ಇವರ ಸಹಕಾರದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ವಸತಿಯುತ 30ನೇ ಉಚಿತ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಶಿಬಿರದಲ್ಲಿ ಗಾಲಿಕುರ್ಚಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.

ಜನ ಸಾಮಾನ್ಯರಿಗೆ ಬೆನ್ನುಹುರಿ ಅಪಘಾತದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಹಾಗೇ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರನ್ನು ಮುಖ್ಯವಾಹಿನಿಗೆ ಕರೆ ತರುವ ಉದ್ದೇಶದಿಂದ ಫೆಬ್ರವರಿ 24 ರಂದು ಜಾಥಾವನ್ನು ನಡೆಸಲಾಯಿತು. ಶಿರಸಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶ್ರೀ ನಾಗಪ್ಪ ಹಸಿರು ನಿಷಾನೆಯನ್ನು ಹಾರಿಸಿ ಜಾಥಾಕ್ಕೆ ಚಾಲನೆಯನ್ನು ನೀಡಿದರು.

ಮಾರಿಕಾಂಬ ದೇವಸ್ಥಾನದಿಂದ ಜಾಥಾವನ್ನು ಪ್ರಾರಂಭಿಸಿ ಹಳೆ ಬಸ್ ಸ್ಟ್ಯಾಂಡ್ ಶಿರಸಿ ಮುಖಾಂತರ ಸಿಪಿ ಬಜಾರ್ ರೋಡ್ ನಿಂದ ಸರ್ಕಾರ್ ಹೋಟೆಲ್ ಮಾರ್ಗವಾಗಿ ದೇವಿಕೆರೆಯಿಂದ ಸಾಗಿ ಶಿರಸಿ ಸ್ಕ್ಯಾನ್ ಸೆಂಟರ್ ತನಕ ನಡೆಸಲಾಯಿತು.

ಒಟ್ಟು 13 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು ಮತ್ತು ಅರೈಕೆದಾರರು, ಶಿರಸಿ ರೋಟರಿ ಕ್ಲಬ್ ಅಧ್ಯಕ್ಷ ಸುಮನ್ ಹೆಗಡೆ, ಶಿರಸಿ ಸ್ಕ್ಯಾನ್ ಸೆಂಟರ್ ನಿರ್ದೇಶಕ ದಿನೇಶ್ ಹೆಗಡೆ, ಶಿರಸಿ ರೋಟರಿ ಕ್ಲಬ್ ಇವೆಂಟ್ ಛೇರ್ ಮ್ಯಾನ್ ಮಹೇಶ್ ತೆಲಂಗ, ಶಿರಸಿ ರೋಟರಿ ಕ್ಲಬ್ ಕಾರ್ಯದರ್ಶಿ ಸರಸ್ವತಿ ಎನ್. ರವಿ ಹಾಗೂ ರೋಟರಿ ಕ್ಲಬ್ ನ ಇನ್ನಿತರ ಸದಸ್ಯರು, ಶಿರಸಿ ರೋಟರಿ ಕ್ಲಬ್ ಖಜಾಂಚಿ ವಿನಾಯಕ್ ಜೋಶಿ, ಸ್ಕ್ಯಾನ್ ಸೆಂಟರ್ ನ ಶ್ರೀ ಮಣಿಕಂಠ, ಸೇವಾಧಾಮ ಸಂಸ್ಥಾಪಕ ಕೆ. ವಿನಾಯಕ ರಾವ್, ಸೇವಾಭಾರತಿ ಸಿಬ್ಬಂದಿವರ್ಗದವರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ 100 ಮಂದಿ ಜಾಥದಲ್ಲಿ ಭಾಗವಹಿಸಿದ್ದರು.

Exit mobile version