Site icon Suddi Belthangady

ಲಾಯಿಲ ಪ್ರಸನ್ನ ಫಾರ್ಮಸಿ ಕಾಲೇಜು ವಾರ್ಷಿಕ ಕ್ರೀಡಾ ಕೂಟ

ಬೆಳ್ತಂಗಡಿ: ತಾಲೂಕಿನ ಪ್ರಸನ್ನ ಫಾರ್ಮಸಿ ಕಾಲೇಜಿನಲ್ಲಿ 2 ದಿನಗಳ ವಾರ್ಷಿಕ ಕ್ರೀಡಾಕೂಟವು ಫೆ. 21 ಮತ್ತು 22ರಂದು ಆಯೋಜಿಸಲಾಗಿತ್ತು. ಕ್ರೀಡಾಕೂಟದ ಮೊದಲನೇ ದಿನ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ದಂತ ವೈದ್ಯ ಡಾ|ಸೂರಜ್ ಉಜಿರೆ ನೆರವೇರಿಸಿದರು.

ಅವರು ಕ್ರೀಡೆ ಮತ್ತು ಆರೋಗ್ಯದ ಮಹತ್ವವನ್ನು ವಿವರಿಸುತ್ತಾ “ಕಲಿಕೆಯು ಕೇವಲ ಪುಸ್ತಕದ ಜ್ಞಾನ ಮಾತ್ರವಲ್ಲ, ಕ್ರೀಡೆಯೂ ಕಲಿಕೆಯ ಒಂದು ಅವಿಭಾಜ್ಯ ಅಂಗವಾಗಿದೆ. ಕ್ರೀಡೆಯು ಕೇವಲ ಸ್ಪರ್ಧೆಗಳಿಗಾಗಿ ಮಾತ್ರವಲ್ಲ, ಅವು ಶಿಸ್ತು, ಒಗ್ಗಟ್ಟನ್ನು ಬೆಳೆಸುತ್ತವೆ” ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಕಾಲೇಜಿನ ಪ್ರಾಂಶುಪಾಲ ಎಂ. ಮಲ್ಲಿಕಾರ್ಜುನ ಗೌಡ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳಿಗೆ ಕ್ರೀಡೆಯ ಮಹತ್ವವನ್ನು ತಿಳಿಸಿದರು.

ಅತಿಥಿಗಳಾದ ಪ್ರಸನ್ನ ಸಿ.ಬಿ.ಎಸ್.ಸಿ ಶಾಲಾ ಮುಖ್ಯೋಪಾಧ್ಯಾಯ ಕೆ.ಎಸ್.ಎನ್. ಭಟ್, ಪ್ರಸನ್ನ ಕೈಗಾರಿಕಾ ತರಬೇತಿ ವಿದ್ಯಾಲಯದ ಪ್ರಾಂಶುಪಾಲ ಅಖಿಲೇಶ್ ಕುಮಾರ್ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಪ್ರಾಧ್ಯಾಪಕಿ ಪ್ರತೀಕ್ಷಾರವರು ಕಾರ್ಯಕ್ರಮ ನಿರೂಪಿಸಿದರು. ಇತರ ಬೋಧಕ ಹಾಗೂ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.

ಕ್ರೀಡಾ ಕೂಟದ ಎರಡೂ ದಿನಗಳೂ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ಆಯೋಜಿಸಲ್ಪಟ್ಟಿದ್ದವು. ಅಥ್ಲೆಟಿಕ್ಸ್ ವಿಭಾಗದಲ್ಲಿ 100, 200, 400, 800 ಮೀಟರ್ ಓಟ, ಉದ್ದ ಜಿಗಿತ, ಶಾಟ್ ಪುಟ್, ಚಕ್ರ ಎಸೆತ‌ ಸ್ಪರ್ಧೆ, ರಿಲೇ ಓಟ ಹಾಗು ಕಬಡ್ಡಿ, ವಾಲಿಬಾಲ್, ಥ್ರೋ ಬಾಲ್, ಕ್ರಿಕೆಟ್ ಮುಂತಾದ ತರಗತಿವಾರು‌ ತಂಡದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ತಮ್ಮ ಶ್ರೇಷ್ಠ ಪ್ರದರ್ಶನವನ್ನು ನೀಡಿದರು.
2ನೇ ದಿನದ ಅಂತ್ಯಕ್ಕೆ ಎಲ್ಲಾ ಪಂದ್ಯಾಟಗಳು ಸುಸೂತ್ರವಾಗಿ ನಡೆದು ವಿಜೇತರನ್ನು ಅಭಿನಂದಿಸಲಾಯಿತು. ಈ ಕ್ರೀಡಾ ಕೂಟವು ಕಾಲೇಜು ವಿದ್ಯಾರ್ಥಿಗಳ ಶಕ್ತಿ ಹಾಗು ಯುಕ್ತಿಯನ್ನು ಪ್ರದರ್ಶಿಸುವ ವೇದಿಕೆಯಾಗಿದ್ದು, ವಿದ್ಯಾರ್ಥಿಗಳು ಕ್ರೀಡಾ ಮನೋಭಾವವನ್ನು ಉಳಿಸಿಕೊಂಡು ಮುಂದಿನ ಸ್ಪರ್ಧೆಗಳತ್ತ ಗಮನ ಹರಿಸುವ ಸುವಿಚಾರದೊಂದಿಗೆ ಕ್ರೀಡಾ ಕೂಟಕ್ಕೆ ತೆರೆ ಎಳೆಯಲಾಯಿತು.

Exit mobile version