ದಾಮೋದರ್ ದೊಂಡೋಲೆ
ಧರ್ಮಸ್ಥಳ : ಶಿವರಾತ್ರಿ ಹಿನ್ನೆಲೆಯಲ್ಲಿ ಓಂ ನಮಃ ಶಿವಾಯ ಎನ್ನುತ್ತಾ ಸಾವಿರಾರು ಭಕ್ತರು ಶ್ರೀಕ್ಷೇತ್ರ ಧರ್ಮಸ್ಥಳದತ್ತ ಬರುತ್ತಿದ್ದಾರೆ. ಪಾದಯಾತ್ರೆ ಮೂಲಕ ಬರುವ ಭಕ್ತರಿಗೆ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಲು ಧರ್ಮಸ್ಥಳದಲ್ಲಿಯೂ ಕೂಡ ತಯಾರಿಗಳು ನಡೆದಿದೆ.
ಫೆ.26ರಂದು ಮಹಾಶಿವರಾತ್ರಿ. ಆ ದಿನದಂದು ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆಗಳು ನೆರವೇರಲಿದೆ. ದೇವರ ಸನ್ನಿಧಾನದಲ್ಲಿ ಬೆಳಗ್ಗಿನಿಂದಲೇ ವಿಶೇಷ ಅಭಿಷೇಕ ಸೇವೆ ನಡೆಯಲಿದೆ.
ಈಗಾಗಲೇ ಧರ್ಮಸ್ಥಳಕ್ಕೆ ಪಾದಯಾತ್ರೆಗೆ ಬರುವ ಭಕ್ತರಲ್ಲಿ ೪೦ ಸಾವಿರಕ್ಕೂ ಅಧಿಕ ಮಂದಿ ನೋಂದಣಿ ಮಾಡಿದ್ದಾರೆ. ನೋಂದಾವಣೆ ಮಾಡದೇ ಬರುವ ಭಕ್ತರ ಸಂಖ್ಯೆ ಅಧಿಕವಾಗಿರುತ್ತದೆ. ೫೦ ಸಾವಿರಕ್ಕೂ ಅಧಿಕ ಭಕ್ತರಿಂದ ಪಾದಯಾತ್ರೆ ಆರಂಭವಾಗಿದೆ. ಬೆಂಗಳೂರಿನಿಂದ ಸೀಗೇಹಳ್ಳಿ, ಅಟ್ಟೂರು, ಯಲಹಂಕ, ವಿಜಯನಗರ, ಗ್ರಾಮಾಂತರ ಹೀಗೆ ೨೫ಕ್ಕೂ ಅಧಿಕ ತಂಡಗಳಿಂದ ಪಾದಯಾತ್ರಿಗಳು ಆಗಮಿಸುತ್ತಿದ್ದಾರೆ. ಮೈಸೂರು, ಹಾಸನ, ಭದ್ರಾವತಿ, ರಾಮನಗರ, ದಾವಣಗೆರೆ, ಚನ್ನರಾಯಪಟ್ಟಣ, ಬೇಲೂರು, ಮಂಡ್ಯ, ಚಿಕ್ಕಮಗಳೂರು, ತುಮಕೂರು, ಕೊಪ್ಪಳ, ಚಿತ್ರದುರ್ಗ, ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ನಾನಾ ಭಾಗಗಳಿಂದ ಧರ್ಮಸ್ಥಳಕ್ಕೆ ಭಕ್ತರು ಪಾದಯಾತ್ರೆ ನಡೆಸುತ್ತಿದ್ದಾರೆ. 10 ಜನರ ತಂಡದಿಂದ ಹಿಡಿದು ೩೦೦೦ಕ್ಕೂ ಅಧಿಕ ಭಕ್ತರ ತಂಡಗಳು ಪಾದಯಾತ್ರೆ ಆರಂಭಿಸಿವೆ.
ವಿಶೇಷ ಬೋರ್ಡ್ ಅಳವಡಿಕೆ: ಪಾದಯಾತ್ರೆ ಮೂಲಕ ಆಗಮಿಸುವ ತಂಡಗಳಿಗೆ ಮಹಾಶಿವರಾತ್ರಿ ಪಾದಯಾತ್ರೆ ಸಮಿತಿ ಮೂಲಕ ಸೂಚನೆಗಳನ್ನು ನೀಡುವ ಫಲಕಗಳನ್ನು ರಸ್ತೆ ಬದಿ ಅಲ್ಲಲ್ಲಿ ಹಾಕಲಾಗಿದೆ. ಪಾದಯಾತ್ರಿಗಳು ಸಂಚರಿಸುವಾಗ ರಸ್ತೆಯ ಬದಿಯನ್ನೇ ಹೆಚ್ಚು ಬಳಸಬೇಕು, ಅಲ್ಲದೇ ವಾಹನ ಸವಾರರು ಕೂಡ ಜಾಗರೂಕರಾಗಿ ವಾಹನ ಚಲಾಯಿಸಬೇಕು ಎಂದು ಸೂಚನಾ ಫಲಕದಲ್ಲಿ ತಿಳಿಸಲಾಗಿದೆ.
ಸ್ವಚ್ಛತೆಯತ್ತ ಹೆಚ್ಚಿನ ಚಿತ್ತ: ಪಾದಯಾತ್ರಿಗಳು ಸಂಚರಿಸುವ ರಸ್ತೆಯುದ್ದಕ್ಕೂ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದಾರೆ.. ಊಟದ ತಟ್ಟೆ, ಪ್ಲಾಸ್ಟಿಕ್ ಇತ್ಯಾದಿಗಳನ್ನು ಅಲ್ಲಲ್ಲಿ ಎಸೆಯದೇ, ಸ್ವಚ್ಛತೆಗಾಗಿ ಹೆಚ್ಚಿನ ಮುತುವರ್ಜಿ ನೀಡುತ್ತಿದ್ದಾರೆ. ಘಾಟಿ ರಸ್ತೆಯಲ್ಲಿ ವಾಹನದಟ್ಟಣೆ ಅಧಿಕ ಇರುವುದರಿಂದ ನಿಧಾನವಾಗಿ ರಸ್ತೆ ಬದಿ ಚಲಿಸುವಂತೆ ಸೂಚಿಸಲಾಗಿದೆ.
ಊಟ, ಉಪಹಾರ, ಪಾನೀಯದ ವ್ಯವಸ್ಥೆ: ಪಾದಯಾತ್ರಿಗಳು ಸಾಗುವ ದಾರಿಯಲ್ಲಿ ಊಟ ಉಪಹಾರ ಪಾನೀಯದ ವ್ಯವಸ್ಥೆ ಮಾಡಲಾಗಿದೆ. ಫೆ.೨೩ರಿಂದಲೇ ಚಾರ್ಮಾಡಿ ಘಾಟ್‌ನ ಕೆಳಭಾಗದಲ್ಲಿ ಬೆಂಗಳೂರಿನ ಉದ್ಯಮಿ ಬಸವರಾಜ್ ಅಂಚೆಪಾಳ್ಯರವರಿಂದ ಊಟ, ಉಪಹಾರದ ವ್ಯವಸ್ಥೆಗಳನ್ನು ನಾಲ್ಕು ದಿನಗಳ ಕಾಲ ಮಾಡಲಿದ್ದಾರೆ. ಅವರು ಈ ಬಗ್ಗೆ ಸುದ್ದಿ ನ್ಯೂಸ್ ಜೊತೆ ಮಾತನಾಡಿ, ಈ ಬಾರಿ ಪಾದಯಾತ್ರಿಗಳಿಗೆ ವಿಶೇಷ ಸೇವೆ ನೀಡಲು ತಯಾರಾಗಿರುವುದಾಗಿ ತಿಳಿಸಿದ್ದಾರೆ. ಬೆಂಗಳೂರಿನ ಭಕ್ತ ವೃಂದ ಹಣ್ಣು ಹಂಪಲು ಹಂಚಲಿದೆ. ಬೇರೆ ಬೇರೆ ಜಿಲ್ಲೆಗಳ ಭಕ್ತರಿಂದಲೂ ಪಾನೀಯ, ಊಟ, ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಚಾರ್ಮಾಡಿ, ಮುಂಡಾಜೆ, ಕಲ್ಮಂಜ ಮುಂತಾದೆಡೆ ಸ್ಥಳೀಯರು ಕೂಡ ಅಪಾರ ಸಂಖ್ಯೆಯಲ್ಲಿ ಪಾದಯಾತ್ರಿಗಳಿಗೆ ಮಜ್ಜಿಗೆ, ಶರಬತ್ತು, ಉಪಹಾರ ನೀಡಲು ತಯಾರಿ ನಡೆಸಿದ್ದಾರೆ.
ಲಕ್ಷ ಜನಕ್ಕೆ ಭಕ್ತರಿಂದ ಅನ್ನದಾನ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶಿವರಾತ್ರಿಯಂದು ಅನ್ನಪೂರ್ಣ ಛತ್ರದ ಹಿಂದೆ ಇರುವ ಮೈದಾನದಲ್ಲಿ ಫೆ.೨೬ರಂದು ಸಂಜೆ ೫ರಿಂದ ಆರು ಭಕ್ತ ತಂಡಗಳಿಂದ ವಿಶೇಷ ಅನ್ನದಾನ ಸೇವೆ ನಡೆಯಲಿದೆ. ಶ್ರೀ ಕ್ಷೇತ್ರದ ಅನ್ನಪೂರ್ಣ ಭೋಜನಾಲಯದಲ್ಲಿ ಆ ದಿನ ಸಂಜೆ ಊಟ ಇರದಿರುವುದರಿಂದ ಭಕ್ತರ ಈ ಸೇವೆಗೆ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ೧ ಲಕ್ಷಕ್ಕೂ ಅಧಿಕ ಮಂದಿಗೆ ಅನ್ನದಾನದ ಸೇವೆ ನಡೆಯಲಿದೆ.
ತಂಗಲು ವಿಶೇಷ ವ್ಯವಸ್ಥೆ: ಪಾದಯಾತ್ರಿಗಳಿಗೆ ತಂಗಲು ಗಂಗೋತ್ರಿ, ಸಾಕೇತ ಸೇರಿದಂತೆ ವಿವಿಧ ಲಾಡ್ಜ್‌ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಗಂಗೋತ್ರಿಯ ಪಕ್ಕದ ಮೈದಾನ, ಅನ್ನಪೂರ್ಣ ಛತ್ರದ ಹಿಂಭಾಗದ ಮೈದಾನ, ಅಮೃತವರ್ಷಿಣಿ ಮುಂತಾದೆಡೆ ಶಾಮಿಯಾನ ಹಾಕಿ ಭಕ್ತರು ವಿರಾಮ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ.
6 ಕಡೆ ವೈದ್ಯಕೀಯ ಕ್ಯಾಂಪ್: ಶಿವರಾತ್ರಿಯ ಸಂದರ್ಭ ಧರ್ಮಸ್ಥಳಕ್ಕೆ ಬರುವ ಭಕ್ತರ ಆರೈಕೆಗಾಗಿ ಚಾರ್ಮಾಡಿ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದ ಬಳಿ, ಮುಂಡಾಜೆಯ ಕ್ರಾಸ್,, ಧರ್ಮಸ್ಥಳ ಮುಖ್ಯ ದ್ವಾರ, ನಿಡ್ಲೆ ಬೂಡುಜಾಲು, ಉಜಿರೆ ಎಸ್ ಡಿ ಎಂ ಆಸ್ಪತ್ರೆ ಮತ್ತು ಕಾಲೇಜಿನ ಮುಂಭಾಗದಲ್ಲಿ ಎಸ್‌ಡಿಎಂ ಆಸ್ಪತ್ರೆಯ ವತಿಯಿಂದ ವಿಶೇಷ ವೈದ್ಯಕೀಯ ಕ್ಯಾಂಪ್ ನಡೆಸಲಾಗುವುದು.
ಬೆಳ್ಳಿ ರಥೋತ್ಸವ: ಶಿವರಾತ್ರಿಯಂದು ಬೆಳಗ್ಗೆಯಿಂದಲೇ ದೇವರಿಗೆ ಅಭಿಷೆಕಗಳು ನಡೆಯಲಿವೆ. ಸಂಜೆ 6 ಗಂಟೆಯಿಂದ 12 ಗಂಟೆಯವರೆಗೆ ವಿಶೇಷ ಪೂಜೆ ನಡೆದು, ಮಹಾಪೂಜೆ ನಡೆಯಲಿದೆ. ರಾತ್ರಿ 12 ಗಂಟೆ ನಂತರ ಉತ್ಸವ ಪ್ರಾರಂಭವಾಗುತ್ತದೆ. ಮುಂಜಾವು ೩ ಗಂಟೆಯ ಸುಮಾರಿಗೆ ದೇವಸ್ಥಾನದ ಹೊರಭಾಗದಲ್ಲಿ ಬೆಳ್ಳಿ ರಥೋತ್ಸವ ನಡೆಯಲಿದೆ. ದೇವಾಲಯಕ್ಕೆ ಒಂದು ಸುತ್ತು ಪ್ರದಕ್ಷಿಣೆಯ ನಂತರ ಮಹಾದ್ವಾರದ ಬಳಿಯಿರುವ ಶಿವರಾತ್ರಿ ಕಟ್ಟೆಯಲ್ಲಿ ವಿಶೇಷ ಪೂಜೆ ನಡೆದು ನಂತರ ದೇವಾಲಯದ ಅಂಗಣದ ಹತ್ತಿರ ವಿಶೇಷ ಪೂಜೆ ನಡೆದು, ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ವಿರಾಜಮಾನರಾಗಲಿದ್ದಾರೆ. ಈ ಶುಭ ದಿನದಂದು ಲಕ್ಷಾಂತರ ಭಕ್ತರು ಆಗಮಿಸಲಿದ್ದು, ಅವರೆಲ್ಲರಿಗೂ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. – ಲಕ್ಷೀನಾರಾಯಣ ರಾವ್, ಪಾರುಪತ್ಯಗಾರರು, ಶ್ರೀ ಕ್ಷೇತ್ರ ಧರ್ಮಸ್ಥಳ
ಭಕ್ತರ ಸ್ವಾಗತಕ್ಕೆ ಸಿದ್ಧ: ಅತೀ ಹೆಚ್ಚಿನ ಸಂಖ್ಯೆಯಲ್ಲಿ ಯುವಕ, ಯುವತಿಯರು ಪಾದಯಾತ್ರೆಗೆ ಹೊರಟಿದ್ದಾರೆ. ಹಲವು ತಂಡಗಳು ಶೇಕಡಾ ೫೦ರಷ್ಟು ಮಾರ್ಗ ಕ್ರಮಿಸಿವೆ. ಧರ್ಮಸ್ಥಳದಿಂದ ಐದಾರು ಕಡೆ ವೈದ್ಯಕೀಯ ಕ್ಯಾಂಪ್ ಮಾಡಲಾಗುತ್ತದೆ. ಈ ಬಾರಿ ಬೆಂಗಳೂರಿನ ಭಕ್ತರ ತಂಡದಿಂದ ಧರ್ಮಸ್ಥಳದ ಹೈಸ್ಕೂಲ್ ಮೈದಾನದಲ್ಲಿ ಊಟದ ವ್ಯವಸ್ಥೆ ಇರಲಿದೆ. ಭಕ್ತರು ಧರ್ಮಸ್ಥಳದಲ್ಲಿ ರಾಷ್ಟ್ರೀಯ, ಅಂತರಾಷ್ಟ್ರೀಯ ಕಲಾವಿದರ ಮೂಲಕ ಕಾರ್ಯಕ್ರಮ ಆಗಬೇಕು ಎಂದು ಖಾವಂದರನ್ನು ಒತ್ತಾಯಿಸಿದ್ದಾರೆ. ಆದರೆ ಧರ್ಮಾಧಿಕಾರಿಗಳು ಶಿವರಾತ್ರಿಯ ಮೊದಲಿನ ದಿನ ಮತ್ತು ಅಂದು ಕೇವಲ ಓಂ ನಮಃ ಶಿವಾಯ ಮಾತ್ರ ಪಠಿಸಬೇಕು. ಅಂದು ಶಿವನ ಬಗ್ಗೆ ಮಾತ್ರ ಧ್ಯಾನ ಇರಬೇಕು ಎಂದು ಹೇಳಿದ್ದಾರೆ. ಎಲ್ಲಾ ವ್ಯವಸ್ಥೆ ಕಲ್ಪಿಸಲು ಹೆಗ್ಗಡೆಯವರು ಮತ್ತು ಹರ್ಷೇಂದ್ರ ಕುಮಾರ್ ಅವರು ಸೂಚಿಸಿದ್ದು, ಬಹುತೇಕ ತಯಾರಿಗಳು ಪೂರ್ಣಗೊಂಡಿವೆ. – ವೀರೂ ಶೆಟ್ಟಿ, ಡಾ.ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ
ಅನ್ನದಾನ ಸೇವೆ: ಶಿವರಾತ್ರಿಯಂದು ಅನ್ನಪೂರ್ಣ ಭೋಜನಾಲಯದಲ್ಲಿ ರಾತ್ರಿಯ ಪ್ರಸಾದ ಇರುವುದಿಲ್ಲ. ಅನ್ನಪೂರ್ಣ ಛತ್ರದ ಹಿಂಭಾಗದ ಮೈದಾನದಲ್ಲಿ ಬೆಂಗಳೂರಿನ ಆರಕ್ಕೂ ಹೆಚ್ಚು ಭಕ್ತರ ತಂಡದಿಂದ ೧ ಲಕ್ಷಕ್ಕೂ ಅಧಿಕ ಮಂದಿಗೆ ಅನ್ನದಾನದ ಸೇವೆ ನಡೆಯಲಿದೆ. ರೈಸ್ ಬಾತ್, ಚೌ ಚೌ ಬಾತ್, ಮುದ್ದೆ, ಅನ್ನ ಸಾಂಬಾರ್ ಮಾಡಿ ಬಡಿಸಲಿದ್ದಾರೆ. ೧ ಸಾವಿರಕ್ಕೂ ಅಧಿಕ ಮಂದಿ ಸ್ವಯಂಸೇವಕರು, ೨೫೦ಕ್ಕೂ ಹೆಚ್ಚು ಬಾಣಸಿಗರು ಈ ಕಾರ್ಯದಲ್ಲಿ ಶ್ರಮಿಸಲಿದ್ದಾರೆ. ಎಸ್‌ಕೆಡಿಆರ್‌ಡಿ ಪಿಯ ಅನಿಲ್ ಕುಮಾರ್‌ರವರ ನೇತೃತ್ವದಲ್ಲಿ ಎಸ್‌ಕೆಡಿಆರ್‌ಪಿಯವರು ಈ ಮಹಾ ಅನ್ನದಾನ ಸೇವೆಯ ಮೇಲ್ವಿಚಾರಣೆ ಮಾಡಲಿದ್ದಾರೆ.- ಸುಬ್ರಹ್ಮಣ್ಯ ಪ್ರಸಾದ್, ಮೇಲ್ವಿಚಾರಕರು, ಅನ್ನಪೂರ್ಣ ಭೋಜನಾಲಯ, ಧರ್ಮಸ್ಥಳ