ಶ್ರೇಯಾ ಪಿ. ಶೆಟ್ಟಿ
ಬೆಳ್ತಂಗಡಿ : ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಹೆಚ್ಚಿಸಲು ಹಾಗೂ ಸಾಹಿತ್ಯಾಭಿಮಾನಿಗಳಿಗಾಗಿ ಪ್ರತಿ ವರ್ಷ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟಗಳಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತಿದೆ.
ಫೆ 21-22ರಂದು ಕಸಾಪದಿಂದ ಮಂಗಳೂರು ವಿವಿಯಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯಲಿದ್ದು ಭರದಿಂದ ಸಿದ್ಧತೆ ನಡೆಯುತ್ತಿದೆ. ಅದೇ ರೀತಿ ದ.ಕ ಜಿಲ್ಲೆಯ ತಾಲೂಕುಗಳಾದ ಸುಳ್ಯದಲ್ಲಿ ನ. ೨೩, ಕಡಬದಲ್ಲಿ ನ. 30, ಬಂಟ್ವಾಳದಲ್ಲಿ ಜ.4, ಮೂಲ್ಕಿಯಲ್ಲಿ ಫೆ.೮ರಂದು ಸಮ್ಮೇಳನಗಳು ಸಂಪನ್ನಗೊಂಡಿವೆ.
ಇದೀಗ ಬೆಳ್ತಂಗಡಿ ತಾಲೂಕು ಪ್ರತಿಯೊಬ್ಬರ ಗಮನ ಸೆಳೆಯುತ್ತಿದ್ದು ಇಲ್ಲಿ ಕನ್ನಡದ ತೇರು ಯಾವಾಗ ಎಳೆಯಲಾಗುತ್ತದೆ ಎಂಬ ಪ್ರಶ್ನೆ ಸಾಹಿತ್ಯಾಭಿಮಾನಿಗಳಲ್ಲಿ ಮೂಡಿದೆ. ಈ ಹಿಂದೆ ಬೆಳ್ತಂಗಡಿ ತಾಲೂಕಿನ ಉಜಿರೆ, ವೇಣೂರು, ಮಡಂತ್ಯಾರು, ಮುಂಡಾಜೆ, ಪೆರಿಂಜೆ ಸೇರಿದಂತೆ ಹಲವೆಡೆ ಸಾಹಿತ್ಯ ಸಮ್ಮೇಳನಗಳು ನಡೆದಿವೆ. ಆದರೆ ಈ ವರ್ಷ ತಾಲೂಕು ಅಧ್ಯಕ್ಷ ಯದುಪತಿ ಗೌಡ ಸಮ್ಮೇಳನ ಗೋಜಿಗೆ ಏಕೆ ಹೋಗುತ್ತಿಲ್ಲ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ.
ಕಸಾಪ ತಾಲೂಕು ಅಧ್ಯಕ್ಷ ಯದುಪತಿ ಗೌಡ ಖಾಸಗಿ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಡಿಸೆಂಬರ್ ತಿಂಗಳಲ್ಲಿ ವಿಂಶತಿ ಎಂಬ ಕಾಲೇಜ್ ಡೇ ಕಾರ್ಯಕ್ರಮದಲ್ಲಿ ಸಮ್ಮೇಳನವನ್ನು ಎರಡು ದಿನ ಹಮ್ಮಿಕೊಂಡಿದ್ದರು. ಹಾಗಾಗಿ ಮತ್ತೆ ಸಾಹಿತ್ಯ ಸಮ್ಮೇಳನ ನಡೆಸುವತ್ತ ಅವರು ಗಮನ ಹರಿಸಿಲ್ಲ.
ಕಳೆದ ವರ್ಷ ಬಹಳ ಭರ್ಜರಿಯಾಗಿ ಸಾಹಿತ್ಯ ಸಮ್ಮೇಳನ ಮಾಡಿದರೂ, ಅದಕ್ಕೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಮಕ್ಕಳಿಗೆ ಪ್ರಯೋಜನ ಆಗಲಿ ಎಂದು ಸಮ್ಮೇಳನ ಮಾಡಿದರೆ ಸದಸ್ಯರು ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ವೇದಿಕೆ ಮೇಲೆ ಗಣ್ಯರು ಇರುತ್ತಾರೆ. ಆದರೆ ಕೆಳಗೆ ಪ್ರೇಕ್ಷಕರಿರುವುದಿಲ್ಲ.
ಪರೀಕ್ಷೆ ಸಮಯ ಬೇರೆ ಬಂದಿರುವುದರಿಂದ ಶಿಕ್ಷಣ ಸಂಸ್ಥೆಯ ಕಡೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಹಾಗಾಗಿ ಸಾಹಿತ್ಯ ಸಮ್ಮೇಳನ ನಡೆಸಲು ಇದು ಪ್ರಶಸ್ತ ಸಮಯ ಅಲ್ಲ. ನಾಮಕಾವಸ್ಥೆಗೆ ಸಮ್ಮೇಳನ ನಡೆಸಲು ಆಗುವುದಿಲ್ಲ ಎನ್ನುವುದು ಕಸಾಪ ತಾಲೂಕು ಅಧ್ಯಕ್ಷರ ಮಾತು.
ಮುಂದಿನ ವರ್ಷ ಸೆಪ್ಟೆಂಬರ್ ಅಥವಾ ನವೆಂಬರ್‌ನಲ್ಲಿ ಕೊಕ್ಕಡದಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ಮಾತುಕತೆ ನಡೆಸಿದ್ದೇವೆ. ಬಾಯಿ ಮಾತಿಗೆ ಎಲ್ಲರೂ ಸಮ್ಮೇಳನ ಆಗಬೇಕು, ಮಾಡಬೇಕು ಎನ್ನುತ್ತಾರೆ.
ಆದರೆ ಯಾರೂ ಸಹಕಾರ ಕೊಡುವುದಿಲ್ಲ. ಸರ್ಕಾರದಿಂದ ಹಿಂದೆ ದುಡ್ಡು ಸಿಗುತ್ತಿತ್ತು. ಹಿಂದಿನ ಸರ್ಕಾರ ಇರುವಾಗ ತಾಲೂಕು ಸಮ್ಮೇಳನಕ್ಕೆ ರೂ.1 ಲಕ್ಷ ಅನುದಾನ ಬರುತ್ತಿತ್ತು. ಈಗ ನಾವು ಅಷ್ಟು ಮೊತ್ತವನ್ನು ಹೊರಗಡೆಯಿಂದ ಹೊಂದಿಸಬೇಕು. ಕಳೆದ ವರ್ಷವೇ ನಮಗೆ ಸರ್ಕಾರದಿಂದ ದುಡ್ಡ ಸಿಕ್ಕಿಲ್ಲ. ಯಾರಾದರು ಸಾಹಿತ್ಯಾಭಿಮಾನಿಗಳು ಮುಂದೆ ನಿಂತು ಸಮ್ಮೇಳನ ನಡೆಸಿದರೆ ಅದಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ. ಬೇರೆ ಊರಿನ ಜನರ ಸಹಕಾರ ಸಿಕ್ಕರೆ ನಮಗೂ ಸಹಾಯ ಆಗುತ್ತದೆ. ಎಂದು ಯದುಪತಿ ಗೌಡ ಹೇಳುತ್ತಾರೆ.
ಬೇರೆ ತಾಲೂಕಿನವರು ಸಮ್ಮೇಳನ ಮಾಡಿದ್ದಾರೆ ನಿಮಗೆ ಮಾಡಲು ಆಗುವುದಿಲ್ಲವೇಕೆ ಎಂಬ ಪ್ರಶ್ನೆ ಕೂಡ ಬಂದಿದೆ. ಅವರು ಬಹುಶಃ ನನ್ನ ರೀತಿಯ ಪರಿಸ್ಥಿತಿಯಲ್ಲಿ ಇಲ್ಲ. ಉದ್ಯಮಿಗಳು, ಬೇರೆ ಕಾರ್ಯ ನಿರ್ವಹಿಸುವವರು ಆಗಿರಬೇಕು. ನನಗೆ ಕಾಲೇಜು ಪ್ರಾಂಶುಪಾಲನಾಗಿ ವಿದ್ಯಾರ್ಥಿಗಳ ಪರೀಕ್ಷೆಯ ಜವಬ್ದಾರಿ ಇದೆ. ಅದನ್ನು ನಿರ್ವಹಿಸಬೇಕು. ಇದರ ಜೊತೆ
ರಾಜೀನಾಮೆ ಕೊಡಿ ಎನ್ನುವ ಪ್ರಶ್ನೆಗಳು ಕೂಡ ಬಂದಿವೆ. ರಾಜ್ಯಾಧ್ಯಕ್ಷರು ರಾಜೀನಾಮೆ ಕೊಡಿ ಅಂದರೆ ನಾನು ಕೊಡಲು ಸಿದ್ಧನಿದ್ದೇನೆ. ಬೇರೆಯವರಿಗೆ ಹೇಳಲು ಅಧಿಕಾರ ಇಲ್ಲ ಎಂದು ಬೇಸರ ಹೊರ ಹಾಕಿದ್ದಾರೆ
ಸಮ್ಮೇಳನ ನಡೆಸಲು ಹಲವಾರು ಒತ್ತಡ ಬಂದಿರುವ ಕುರಿತು ಮಾತನಾಡಿದ ಅವರು, ರಾಜ್ಯಾಧ್ಯಕ್ಷರು ಕೂಡ ಸಾಹಿತ್ಯ ಸಮ್ಮೇಳನ ಮಾಡಿ ಎಂದು ಒತ್ತಾಯ ಮಾಡುವ ಹಾಗಿಲ್ಲ. ಯಾಕೆಂದರೆ ಅವರು ಕೂಡ ಕೈಯಿಂದ ಹಣ ಹಾಕುವುದಿಲ್ಲ. ನಮಗೆ ಸರ್ಕಾರದಿಂದ ವರ್ಷಕ್ಕೆ ಸಿಗುವುದು ರೂ. 7000. ಅದರಲ್ಲಿ ನಾವು ಬೇರೆ ಬೇರೆ ಕಾರ್ಯಕ್ರಮ ಮಾಡಬೇಕಾಗುತ್ತದೆ. ಅದರಲ್ಲಿ ಎಷ್ಟು ಕಾರ್ಯಕ್ರಮ ಮಾಡಬಹುದು ಎಂದು ಯೋಚನೆ ಮಾಡಿ ಎಂದು ಪಶ್ನಿಸಿದ್ದಾರೆ.
ರಾಜ್ಯ ಮಟ್ಟದ ಸಮ್ಮೇಳನ ಮಾಡುವಾಗ ಸರ್ಕಾರದಿಂದ ರೂ. ೨೫ ಕೋಟಿ ಬರುತ್ತದೆ. ಜಿಲ್ಲಾ ಮಟ್ಟಕ್ಕೆ 5 ಲಕ್ಷ, ತಾಲೂಕು ಮಟ್ಟಕ್ಕೆ ನಯಾ ಪೈಸೆ ಸರ್ಕಾರದಿಂದ ಸಿಗುವುದಿಲ್ಲ. ಈ ಶೈಕ್ಷಣಿಕ ವರ್ಷದಲ್ಲಿ ನಮಗೆ ಸಮ್ಮೇಳನ ಮಾಡಲು ಆಗುವುದಿಲ್ಲ. ವರ್ಷಕ್ಕೆ ಸಣ್ಣ ಪುಟ್ಟ ಕಾರ್ಯಕ್ರಮ ಮಾಡುತ್ತೇವೆ. ಯಶೋವರ್ಮರು ಅಧ್ಯಕ್ಷರಾಗಿ ಬರುವ ಹಿಂದಿನ 4ವರ್ಷ ಸಾಹಿತ್ಯ ಪರಿಷತ್ ಇದೆಯಾ ಇಲ್ಲವಾ ಎಂದೂ ಗೊತ್ತಾಗುತ್ತಿರಲಿಲ್ಲ ಎಂದರು.
ಸದ್ಯಕ್ಕೆ ನಾನು ಜಿಲ್ಲಾ ಸಾಹಿತ್ಯ ಸಮ್ಮೇಳನದ ಕೆಲಸದಲ್ಲಿ ತೊಡಗಿದ್ದೇನೆ. ಇದು ಮುಗಿದ ಬಳಿಕ ಬೆಳ್ತಂಗಡಿಯ ಸಾಹಿತ್ಯ ಸಮ್ಮೇಳನ ಕುರಿತಾಗಿ ಯೋಚನೆ ಮಾಡುತ್ತೇನೆ. ಸರ್ಕಾರದಿಂದ ಅನುದಾನ ಬಂದರೆ ಮಾರ್ಚ್ ಅಥವಾ ಎಪ್ರಿಲ್‌ನಲ್ಲಿಯೇ ಸಮ್ಮೇಳನ ಮಾಡುತ್ತೇವೆ – ಎಂ ಪಿ ಶ್ರೀನಾಥ, ದ.ಕ ಜಿಲ್ಲಾ ಕಸಾಪ ಅಧ್ಯಕ್ಷ
ನನ್ನ ಬಗ್ಗೆ ಅನೇಕರಿಗೆ ಅಸಮಾಧಾನವಿದೆ: ನಾನು ಅಧ್ಯಕ್ಷನಾದ ಬಗ್ಗೆಯೇ ಅನೇಕರಿಗೆ ಅಸಮಾಧಾನ ಇದೆ. ಹಿಂದಿನ ಅಧ್ಯಕ್ಷ ಯಶೋವರ್ಮರ ಸ್ಥಾನಮಾನಕ್ಕೂ ನನ್ನ ಸ್ಥಾನಮಾನಕ್ಕೂ ವ್ಯತ್ಯಾಸವಿದೆ. ಅವರು ಒಂದು ಕರೆ ಮಾಡಿದರೆ ಜನ ಬರುತ್ತಾರೆ. ನಾನು ಕರೆದರೆ ಹಾಗಲ್ಲ. ಕಳೆದ ವರ್ಷ ಬಹಳ ಉತ್ತಮ ಮಟ್ಟದ ಸಮ್ಮೇಳನ ಮಾಡಿzನೆ. ಮುಂದಿನ ವರ್ಷವೂ ಮಾಡುತ್ತೇನೆ. ನಾಮಕಾವಸ್ಥೆಗೆ ಮಾಡುವುದಿಲ್ಲ. ಹೊರಗಡೆ ಮಾತನಾಡುವವರಿಂದ ನಯಾ ಪೈಸೆ ಪ್ತಯೋಜನ ಇಲ್ಲ. ಕಳೆದ ವರ್ಷ ನನ್ನ ಆಮಂತ್ರಣ ಸ್ವೀಕರಿಸದವರೂ ಇದ್ದಾರೆ. ಯಾಕೆಂದರೆ ನಾನು ಮೇಲ್ವರ್ಗದವನಲ್ಲ. ಮೇಲ್ವರ್ಗದವರ ಸಹಕಾರ ನನಗಿಲ್ಲ. ಹಾಗಂತ ನಾನು ನಿರಾಸೆ ಪಡುವುದಿಲ್ಲ. ನನ್ನ ಸಂಸ್ಥೆಯಲ್ಲಿ ನೂರು ಜನ ಸಿಬ್ಬಂದಿ ಇದ್ದಾರೆ. ನಾವು ಕಳೆದ ವರ್ಷ ಬಹಳ ಚೆನ್ನಾಗಿ ಕಾರ್ಯಕ್ರಮ ಮಾಡಿದ್ದೇವೆ. ಯಾರಾದರೂ ಸಂಘಟಕರು ಬಂದು ನಾವು ಸಮ್ಮೇಳನ ಮಾಡುತ್ತೇವೆ ಎಂದು ಹೇಳಿದರೆ ಮಾರ್ಚ್, ಎಪ್ರಿಲ್ ಯಾವತ್ತು ಬೇಕಾದರೂ ಮಾಡಲು ಸಿದ್ಧರಿzವೆ. ಅದಕ್ಕಾಗಿ ನೀವು ರಾಜೀನಾಮೆ ಕೊಡಿ ಎಂದು ಹೇಳುವುದು ಒಳ್ಳೆಯ ಲಕ್ಷಣ ಅಲ್ಲ. ಲಕ್ಷಗಟ್ಟಲೆ ಖರ್ಚು ಮಾಡಲು ನಮ್ಮಲ್ಲಿ ದುಡ್ಡಿಲ್ಲ.
ಯದುಪತಿ ಗೌಡ, ಕಸಾಪ ತಾಲೂಕು ಅಧ್ಯಕ್ಷ