Site icon Suddi Belthangady

ಉಪ್ಪಿನಂಗಡಿ-ಬೆಳ್ತಂಗಡಿ ರಸ್ತೆ ಅಭಿವೃದ್ಧಿಗೆ ಶೀಘ್ರದಲ್ಲಿ ಅನುದಾನ ಬಿಡುಗಡೆ – ಕುಪ್ಪೆಟ್ಟಿಗೆ ಭೇಟಿ ನೀಡಿದ ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ

ಬೆಳ್ತಂಗಡಿ: ಉಪ್ಪಿನಂಗಡಿ-ಬೆಳ್ತಂಗಡಿ ರಸ್ತೆಯನ್ನು ಅದಷ್ಟು ಶೀಘ್ರವಾಗಿ ಅಭಿವೃದ್ಧಿಗೊಳಿಸಲು ಅಗತ್ಯವಾದ ಅನುದಾನ ಬಿಡುಗಡೆ ಮಾಡಿ ರಸ್ತೆಗೆ ಮರು ಡಾಮರೀಕರಣ ಮಾಡಲಾಗುವುದು ಎಂದು ರಾಜ್ಯ ಸರ್ಕಾರದ ಲೋಕೋಪಯೋಗಿ ಖಾತೆಯ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದ್ದಾರೆ.

ಫೆ.16ರಂದು ಸುಳ್ಯ ಮತ್ತು ಪುತ್ತೂರಿಗೆ ಭೇಟಿ ನೀಡಿದ್ದ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಪುತ್ತೂರಿನಲ್ಲಿ ಭೇಟಿ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಬೆಳ್ತಂಗಡಿ ತಾಲೂಕಿನ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಒದಗಿಸುವಂತೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಸಚಿವರು ನಂತರ ಉಪ್ಪಿನಂಗಡಿ-ಬೆಳ್ತಂಗಡಿ ರಸ್ತೆಯ ಸ್ಥಿತಿಗತಿಗಳನ್ನು ವೀಕ್ಷಿಸಿದರು. ಈ ವೇಳೆ ಕುಪ್ಪೆಟ್ಟಿ ಮಸೀದಿಯಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಸಚಿವರಿಗೆ ಉಪ್ಪಿನಂಗಡಿ-ಬೆಳ್ತಂಗಡಿ ರಸ್ತೆ ಮತ್ತು ಇನ್ನಿತರ ಒಳ ರಸ್ತೆಗಳನ್ನು ದುರಸ್ತಿ ಪಡಿಸುವಂತೆ ಹಾಗೂ ಕುಪ್ಪೆಟ್ಟಿ ನದಿಗೆ ತಡೆಗೊಡೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಸಾರ್ವಜನಿಕರು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು ತಾವು ನೀಡಿರುವ ಮನವಿಯನ್ನು ಪರಿಶೀಲಿಸಿ ಆದ್ಯತೆಯ ಮೇಲೆ ಅನುದಾನ ನೀಡಲಾಗುವುದು ಹಾಗೂ ಉಪ್ಪಿನಂಗಡಿ-ಬೆಳ್ತಂಗಡಿ ರಸ್ತೆಯನ್ನು ಅದಷ್ಟು ಶೀಘ್ರವಾಗಿ ಅಭಿವೃದ್ಧಿಗೊಳಿಸಲು ಅಗತ್ಯವಾದ ಅನುದಾನ ಬಿಡುಗಡೆ ಮಾಡಿ ರಸ್ತೆಗೆ ಮರು ಡಾಮರೀಕರಣ ಮಾಡಲಾಗುವುದು ಎಂದು ಭರವಸೆ ನೀಡಿದರು. ನಂತರ ಸಚಿವರು ಗುರುವಾಯನಕೆರೆ ಮಾರ್ಗವಾಗಿ ಉಡುಪಿಗೆ ಪ್ರಯಾಣ ಬೆಳೆಸಿದರು.

ಸರಕಾರಿ ವಕೀಲ ಮನೋಹರ್ ಕುಮಾರ್ ಇಳಂತಿಲ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶೇಖರ್ ಕುಕ್ಕೇಡಿ, ಬೆಳ್ತಂಗಡಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಜಿಲ್ಲಾ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಕರೀಂ ಗೇರುಕಟ್ಟೆ, ತಾಲೂಕು ಭೂನ್ಯಾಯ ಮಂಡಳಿ ಸದಸ್ಯ ಇಸ್ಮಾಯಿಲ್ ಕೆ, ಅಕ್ರಮ ಸಕ್ರಮ ಸಮಿತಿ ಸದಸ್ಯ ಅಯೂಬ್ ಕಾಣಿಯೂರು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಮ್ ಕೊಕ್ಕಡ, ತಣ್ಣೀರುಪಂತ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕ ಜಯವಿಕ್ರಂ ಕಲ್ಲಾಪು, ತಣ್ಣೀರುಪಂತ ಗ್ರಾಮ ಪಂಚಾಯತ್ ಅಧ್ಯಕ್ಷೆ ಹೇಮಾವತಿ, ಸದಸ್ಯರಾದ ಸದಾನಂದ ಶೆಟ್ಟಿ, ತಾಜುದ್ದೀನ್, ಕುಪ್ಪೆಟ್ಟಿ ಮಸೀದಿಯ ಅಧ್ಯಕ್ಷ ಆದಂ ಅಲ್‌ಮದೀನ, ಕಾರ್ಯದರ್ಶಿ ಹೂದರ್ ಮುಸ್ಲಿಯಾರ್, ಪ್ರಮುಖರಾದ ಹನೀಫ್ ಉಜಿರೆ, ಬಾಲಕೃಷ್ಣ ಶೆಟ್ಟಿ ಬಾರ್ಯ, ಅಬ್ಬಾಸ್ ಬಟ್ಲಡ್ಕ, ಯೋಗೀಶ್ ಅಳಿಕೆ, ಇಬ್ರಾಹಿಂ ಪಿಲಿಗೂಡು, ಉಸ್ಮಾನ್ ಕಳಂಜಿಬೈಲು ಸೇರಿದಂತೆ ಹಲವರು ಸಚಿವರ ಭೇಟಿ ವೇಳೆ ಉಪಸ್ಥಿತರಿದ್ದರು.

Exit mobile version