ಬೆಳ್ತಂಗಡಿ: ಚಾರ್ಮಾಡಿ ಹೆದ್ದಾರಿ ಕಾಮಗಾರಿ ಕುರಿತು ಶಾಸಕ ಹರೀಶ್ ಪೂಂಜ ಕಳವಳ ವ್ಯಕ್ತಪಡಿಸಿದ್ದಾರೆ. ಲೋಕೋಪಯೋಗಿ ಖಾತೆಯ ಸಚಿವ ಸತೀಶ್ ಜಾರಕಿಹೊಳಿ ಮಂಗಳೂರಿನಲ್ಲಿರುವ ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆಸಿದ ಇಲಾಖಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಹರೀಶ್ ಪೂಂಜ ಚಾರ್ಮಾಡಿ ಹೆದ್ದಾರಿ ಸುಧಾರಣೆ ಟೆಂಡರ್ ವಹಿಸಿಕೊಂಡ ಗುತ್ತಿಗೆದಾರರು ಇನ್ನೂ ಯಾವುದೇ ಕೆಲಸ ಆರಂಭಿಸದಿರುವುದು ಈ ಬಾರಿಯ ಮಳೆಗಾಲದಲ್ಲಿ ಸಮಸ್ಯೆಯಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು. ಇದೇ ಗುತ್ತಿಗೆದಾರರು ಶೃಂಗೇರಿ, ಹೊರನಾಡು ಕಾಮಗಾರಿ ಮುಗಿಸಲು ಹಲವು ವರ್ಷ ತೆಗೆದುಕೊಂಡಿರುವುದನ್ನು ಪೂಂಜ ಅವರು ಸಚಿವರ ಗಮನಕ್ಕೆ ತಂದರು.
ಪ್ರಸ್ತಾವಿತ ಮೂಲ ವೆಚ್ಚವಾದ 300 ಕೋಟಿ ರೂ.ನಿಂದ ಶೇ.40ರಷ್ಟು ಕಡಿಮೆ ವೆಚ್ಚ ಕೋಟ್ ಮಾಡಿರುವ ಗುತ್ತಿಗೆದಾರರಿಗೆ ಕಾರ್ಯಾದೇಶ ಕೊಡಲಾಗಿದೆ. ಆದರೆ ಅವರು ಇಷ್ಟು ಕಡಿಮೆ ವೆಚ್ಚದಲ್ಲಿ ಕೆಲಸ ಮಾಡುವುದು ಹೇಗೆ ಎಂದು ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅಚ್ಚರಿ ವ್ಯಕ್ತಪಡಿಸಿದರು. ಬೆಳ್ತಂಗಡಿಯ ಐಬಿ ಕಾಮಗಾರಿ ಅರ್ಧಕ್ಕೇ ಬಾಕಿಯಾಗಿದೆ. ಅದನ್ನು ಪೂರ್ಣಗೊಳಿಸಬೇಕು ಎಂದು ಶಾಸಕ ಹರೀಶ್ ಪೂಂಜ ಒತ್ತಾಯಿಸಿದರು. ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಅಶೋಕ್ ಕುಮಾರ್ ರೈ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ರಾಜೇಶ್ ನಾಕ್, ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮಹಿಲನ್ ಮುಂತಾದವರು ಭಾಗವಹಿಸಿದ್ದರು.