ಬೆಳ್ತಂಗಡಿ: ಗುರುವಾಯನಕೆರೆಯಿಂದ ಉಪ್ಪಿನಂಗಡಿ ರಸ್ತೆಯಲ್ಲಿ ಹತ್ತು ಕಿಲೋ ಮೀಟರ್ ತನಕ ಕೇಂದ್ರ ಸರ್ಕಾರದ ಕೇಂದ್ರ ರಸ್ತೆ ಹಾಗೂ ಮೂಲ ಸೌಕರ್ಯ ನಿಧಿಯಿಂದ 9 ಕೋಟಿ ವೆಚ್ಚದಲ್ಲಿ ಮರು ಡಾಮರೀಕರಣವಾಗಲಿದೆ. ಹರೀಶ್ ಪೂಂಜರವರು ಹಿಂದಿನ ಅವಧಿಯಲ್ಲಿ ಶಾಸಕರಾಗಿದ್ದ ಸಮಯದಲ್ಲಿ ತಾಲೂಕಿಗೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.
9 ಕೋಟಿ ರೂ ವೆಚ್ಚದಲ್ಲಿ ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಯಲ್ಲಿ ನಡೆಯಲಿರುವ ಮರುಡಾಮರೀಕರಣ ಕಾಮಗಾರಿಗೆ ಫೆ. 19ರಂದು ಗುರುವಾಯನಕೆರೆಯ ಕುಲಾಲ ಮಂದಿರದ ವಠಾರದಲ್ಲಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಸಂಸದನಾದ ಬಳಿಕ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಅಭಿವೃದ್ಧಿ ಕಾಮಗಾರಿಯ ಶಿಲಾನ್ಯಾಸಕ್ಕೆ ಬಂದಿದ್ದೇನೆ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಭಾರತೀಯ ಜನತಾ ಪಾರ್ಟಿಗೆ ತುಂಬಾ ಶಕ್ತಿಯನ್ನು ಕೊಟ್ಟ ಕ್ಷೇತ್ರವಾಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಣ್ಣ ಸಣ್ಣ ಅನುದಾನಕ್ಕೂ ಕಾದು ನೋಡುವ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.
ಮಂಜೂರಾತಿ ಮಾಡಿಸುತ್ತೇನೆ: ದ.ಕ ಕನ್ನಡ ಜಿಲ್ಲೆಗೆ ಮಂಜೂರಾದ ಏಕಲವ್ಯ ಮಾದರಿ ವಸತಿ ಶಾಲೆಯನ್ನು ಬೆಳ್ತಂಗಡಿ ಕ್ಷೇತ್ರಕ್ಕೆ ನೀಡಿದ್ದೇನೆ. ಇದನ್ನು ಇಂದಬೆಟ್ಟಿನಲ್ಲಿ ತೆರೆಯುವ ಬಗ್ಗೆ ಚಿಂತನೆ ನಡೆದಿದೆ. ಇದಕ್ಕೆ ಜಾಗವನ್ನು ಗುರುತಿಸಲಾಗಿದೆ. ಅರಣ್ಯ ಇಲಾಖೆ ನಿರಾಕ್ಷೇಪಣಾ ಪತ್ರ ಕೊಟ್ಟಿಲ್ಲ. ಈ ಪ್ರಕ್ರಿಯೆ ಆದ ಬಳಿಕ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ ಮಂಜೂರಾತಿ ಮಾಡಿಸುತ್ತೇನೆ ಎಂದು ಭರವಸೆ ನೀಡಿದ ಸಂಸದರು ಚಾರ್ಮಾಡಿ ರಸ್ತೆಯ ಮುಂದಿನ ಹಂತದ ಕಾಮಗಾರಿಯ ಬಗ್ಗೆ ಟೆಂಡರ್ ಆಗಿ ಗುತ್ತಿಗೆದಾರರು ನೇಮಕವಾಗಿದೆ. ಶೀಘ್ರದಲ್ಲಿ ಶಾಸಕರು ಮತ್ತು ನಾನು ಇಲಾಖೆ ಅಧಿಕಾರಿಗಳೊಂದಿಗೆ ಸೇರಿಸಿಕೊಂಡು ಸಮಸ್ಯೆಯಾಗದ ರೀತಿ ಗುತ್ತಿಗೆದಾರರ ಜೊತೆ ಮಾತನಾಡಿಕೊಂಡು ಯೋಜನೆಯನ್ನು ರೂಪಿಸುತ್ತೇವೆ ಎಂದು ಹೇಳಿದರು. ಉಜಿರೆ-ಪೆರಿಯಶಾಂತಿ ರಸ್ತೆಯ ಟೆಂಡರ್ ಮುಗ್ರೋಡಿ ಕನ್‌ಸ್ಟ್ರಕ್ಷನ್‌ನವರಿಗೆ ಸಿಕ್ಕಿದೆ. ಅದಷ್ಟು ಬೇಗ ರಸ್ತೆಯ ಕಾಮಗಾರಿ ಪ್ರಾರಂಭವಾಗುತ್ತದೆ. ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆ ಕಾಮಗಾರಿ ಒಳ್ಳೆಯ ರೀತಿಯಿಂದ ವೇಗವಾಗಿ ಆಗುತ್ತಿದೆ. ಅದಷ್ಟು ಬೇಗ ಈ ಕಾಮಗಾರಿ ಮುಗಿಯುತ್ತದೆ ಎಂದು ಬ್ರಿಜೇಶ್ ಚೌಟ ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಾರೆಂಕಿ, ಜಯಾನಂದ ಗೌಡ, ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ, ಉದ್ಯಮಿ ಶಶಿಧರ ಶೆಟ್ಟಿ ಬರೋಡ ನವಶಕ್ತಿ, ಪ್ರಮುಖರಾದ ರಕ್ಷಿತ್ ಪಣಿಕ್ಕರ, ತಣ್ಣೀರುಪಂತ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಯಾನಂದ ಕಲ್ಲಾಪು, ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಕಾರ, ಸುಂದರ ಹೆಗ್ಡೆ ವೇಣೂರು, ಗಣೇಶ್ ನಾವೂರು, ಸೀತಾರಾಮ ಬೆಳಾಲು, ವಿಠಲ ಮೂಲ್ಯ, ಪ್ರದೀಪ್ ಶೆಟ್ಟಿ, ಈಶ್ವರ್ ಭೈರ, ವಕೀಲ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಉದಯ್ ಬಂದಾರು, ಮಲಂವತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಜೈನ್, ರಾಜ್ ಪ್ರಕಾಶ್ ಶೆಟ್ಟಿ, ರಾಜೇಶ್ ಕುಲಾಲ್ ಮಾಲಾಡಿ, ಶರತ್ ಕುಮಾರ್ ಶೆಟ್ಟಿ, ಸಂತೋಷ್ ಗುರುವಾಯನಕೆರೆ, ಚಂದ್ರಕಾಂತ್ ನಿಡ್ಡಾಜೆ, ನವೀನ್ ನೆರಿಯ ಮೊದಲಾದವರು ಉಪಸ್ಥಿತರಿದ್ದರು.
ಗುರುವಾಯನಕೆರೆಯಿಂದ ಪಿಲಿಗೂಡು ತನಕ ಮರುಡಾಮರೀಕರಣ: ಪೂಂಜ
ಶಾಸಕ ಹರೀಶ್ ಪೂಂಜ ಮಾತನಾಡಿ ಮೊದಲ ಹಂತದಲ್ಲಿ ಗುರುವಾಯನಕೆರೆಯಿಂದ ಪಿಲಿಗೂಡು ತನಕ ಮರು ಡಾಮರೀಕರಣಗೊಳ್ಳಲಿದೆ. ಪಿಲಿಗೂಡು ನಂತರ ರಸ್ತೆ ಇನ್ನಷ್ಟು ಹದೆಗೆಟ್ಟಿದೆ. ಉಳಿದ ರಸ್ತೆಯ ಅಭಿವೃದ್ಧಿಗೆ ಅನುದಾನ ನೀಡಬೇಕು ಎಂದು ಲೋಕೋಪಯೋಗಿ ಸಚಿವರಿಗೆ ಮನವಿ ಮಾಡಿದ್ದೇವೆ. ಎರಡು ವರ್ಷದಿಂದ ತಾಲೂಕಿನ ಅಭಿವೃದ್ಧಿಗೆ ಅನುದಾನ ಬರುತ್ತಿಲ್ಲ. ಇವತ್ತು ಅಭಿವೃದ್ಧಿ ಕಾಣದ ರಾಜ್ಯ ಇದ್ದರೆ ಅದು ಕರ್ನಾಟಕ. ಮುಂದಿನ ದಿನಗಳಲ್ಲಿ ಬಜೆಟ್ ನಂತರ ತಾಲೂಕಿನ ಹಾಗೂ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಅನುದಾನ ಕೊಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಇzವೆ ಎಂದು ಹೇಳಿದರು.