Site icon Suddi Belthangady

ಇಲಾಖಾಧಿಕಾರಿಗಳ ಗೈರು – ಗ್ರಾಮಸ್ಥರು ಗರಂ – ಪಂಚಾಯತ್ ನೀರು ದುರ್ಬಳಕೆ ಮಾಡಿದರೆ ಸಂಪರ್ಕ ಕಡಿತ

ಮುಂಡಾಜೆ: ಇಲಾಖಾಧಿಕಾರಿಗಳು ಗ್ರಾಮಸಭೆಗೆ ಗೈರಾದ ಕಾರಣ ಗ್ರಾಮಸ್ಥರು ಗರಂ ಆದ ಘಟನೆ ಮುಂಡಾಜೆ ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ನಡೆಯಿತು. ಗ್ರಾ. ಪಂ. ಅಧ್ಯಕ್ಷ ಗಣೇಶ ಬಂಗೇರ ಅವರ ಅಧ್ಯಕ್ಷತೆಯಲ್ಲಿ ಫೆ. 19ರಂದು ನಡೆದ ಗ್ರಾಮ ಸಭೆಗೆ ಹೆಚ್ಚಿನ ಇಲಾಖೆಗಳ ಅಧಿಕಾರಿಗಳು ಹಾಜರಾಗಿರಲಿಲ್ಲ. ಇದರಿಂದ ಗ್ರಾಮಸ್ಥರು ಆಕ್ರೋಶಗೊಂಡರು.

ನೋಡಲ್ ಅಧಿಕಾರಿ ಪಶು ಸಂಗೋಪನಾ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ. ಯತೀಶ್ ಕುಮಾರ್ ಕೆ. ಎಸ್. ಮಾತನಾಡಿ ಇಲಾಖೆಯ ಅಧಿಕಾರಿಗಳಿಗೆ ಪಂಚಾಯಿತಿಯಿಂದ ಗ್ರಾಮ ಸಭೆಯಲ್ಲಿ ಭಾಗವಹಿಸುವಂತೆ ತಿಳಿಸಲಾಗಿದೆ. ಅವರು ಬರುವ ನಿರೀಕ್ಷೆಯಿದ್ದು ಗ್ರಾಮ ಸಭೆ ಮುಂದುವರಿಸಲು ಗ್ರಾಮಸ್ಥರು ಅವಕಾಶ ನೀಡುವಂತೆ ಕೋರಿದ ಬಳಿಕ ಗ್ರಾಮ ಸಭೆ ಮುಂದುವರೆಯಿತು. ಆದರೆ ಹೆಚ್ಚಿನ ಇಲಾಖೆಯ ಅಧಿಕಾರಿಗಳು ಹಾಜರಾಗಲಿಲ್ಲ.

ಗ್ರಾಮಸ್ಥ ಕಜೆ ವೆಂಕಟೇಶ್ವರ ಭಟ್ ಮಾತನಾಡಿ, ಗ್ರಾಮದಲ್ಲಿರುವ ಕಿಂಡಿ ಅಣೆಕಟ್ಟುಗಳ ಹೂಳನ್ನು ತೆರವು ಮಾಡಲು ಮುಂದಾದರೆ ಪೋಲಿಸ್, ಅರಣ್ಯ ಇಲಾಖೆ ಸಹಿತ ಕೆಲವು ಇಲಾಖೆಗಳು ಅಡ್ಡಿಪಡಿಸುತ್ತವೆ. ಹೂಳನ್ನು ತೆರವುಗೊಳಿಸಲು ಪಂಚಾಯಿತಿಯಿಂದ ಅನುಮತಿ ನೀಡುವಂತಾಗಬೇಕು ಎಂಬ ವಿಚಾರವನ್ನು ಪ್ರಸ್ತಾಪಿಸಿದರು. ಇದು ಕಂದಾಯ ಇಲಾಖೆ ವ್ಯಾಪ್ತಿಯಾದ ಕಾರಣ ಅವರು ಈ ಬಗ್ಗೆ ಗಮನಹರಿಸಬೇಕೆಂದು ಅಧ್ಯಕ್ಷರು ಸಮಜಾಯಿಷಿ ನೀಡಿದರು.

ಮುಂಡಾಜೆಯಲ್ಲಿ ಎರಡು ಸರಕಾರಿ ಹಾಸ್ಟೆಲ್‌ಗಳಿದ್ದು ಇಲ್ಲಿ ವಾರ್ಡನ್‌ಗಳಿಲ್ಲದ ಕಾರಣ ಮಕ್ಕಳ ಸ್ಥಿತಿಗತಿ ವಿಚಾರಿಸುವವರೇ ಇಲ್ಲದಂತಾಗಿದೆ. ಇಲ್ಲಿ ತಕ್ಷಣ ವಾರ್ಡನ್ ನೇಮಿಸಬೇಕು ಎಂದು ಚೆನ್ನಕೇಶವ ಅರಸಮಜಲ್ ಹೇಳಿದರು. ಈ ಬಗ್ಗೆ ತಕ್ಷಣ ಸಮಾಜ ಕಲ್ಯಾಣ ಇಲಾಖೆಗೆ ಪತ್ರ ಬರೆಯುವುದಾಗಿ ನಿರ್ಣಯಿಸಲಾಯಿತು.

ಮಲ್ಲಿಕಟ್ಟೆ ಎಂಬಲ್ಲಿರುವ ಕೆರೆಯನ್ನು ಅಭಿವೃದ್ಧಿಪಡಿಸಿದರೆ ಗ್ರಾಮದ ನೀರಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂಬ ವಿಚಾರ ಪ್ರಸ್ತಾಪವಾಯಿತು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಗ್ರಾಮದ ಅಲ್ಲಲ್ಲಿ ಸಮಸ್ಯೆಗಳು ಉಂಟಾಗಿವೆ. ಜಾಗ ಕಳೆದುಕೊಳ್ಳುವವರಿಗೆ ಸರಿಯಾದ ಪರಿಹಾರ ಮೊತ್ತ ನಿಗದಿಪಡಿಸಿಲ್ಲ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳನ್ನು ಹಾಗೂ ಗುತ್ತಿಗೆದಾರರನ್ನು ಕರೆದು ಸಭೆ ನಡೆಸಬೇಕೆಂದು ಗ್ರಾಮಸ್ಥ ನಾಮದೇವ ರಾವ್ ಆಗ್ರಹಿಸಿದರು.

ಕುಡಿಯುವ ನೀರನ್ನು ಕೃಷಿಗೆ ಉಪಯೋಗಿಸುವುದಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಸಭೆಯ ಗಮನಕ್ಕೆ ತಂದರು. ಆಟೋರಿಕ್ಷಾಗಳಲ್ಲಿ ನಿಗದಿತ ಸಂಖ್ಯೆಗಿಂತ ಅಧಿಕ ಮಕ್ಕಳನ್ನು ಕೊಂಡೊಯ್ಯುವ ವಿಚಾರವನ್ನು ಗ್ರಾಮಸ್ಥ ಬಿಜು ಸಭೆಯ ಗಮನಕ್ಕೆ ತಂದರು.

ಮುಂಡಾಜೆಯ ರುದ್ರ ಭೂಮಿಗೆ ಬೇಲಿ ರಚಿಸಬೇಕೆಂದು ಗ್ರಾಮಸ್ಥರಾದ ಅನಂತ ಮತ್ತು ವಾಸು ಆಗ್ರಹಿಸಿದರು. ಮುಂಡಾಜೆ ಹಿಪ್ರಾ ಶಾಲೆಯ ಆವರಣದಲ್ಲಿರುವ ಅಪಾಯಕಾರಿ ಮರಗಳ ತೆರವಿನ ಕುರಿತು ಅರಣ್ಯ ಇಲಾಖೆಯ ಗಮನಕ್ಕೆ ತರಲಾಯಿತು. ಉಪಾಧ್ಯಕ್ಷೆ ಸುಮಲತಾ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸದಸ್ಯೆ ರಂಜಿನಿ ಸ್ವಾಗತಿಸಿದರು. ಪಿಡಿಒ ಗಾಯತ್ರಿ ವರದಿ ವಾಚಿಸಿದರು.

ಆದ್ಯತೆಯ ಮೇರೆಗೆ ಹಂಚಿಕೆ: ಗ್ರಾಮದಲ್ಲಿ 50-60 ಹೊಸ ಮನೆ ಕಟ್ಟಲು ಅರ್ಜಿಗಳು ಬಂದಿವೆ. 70ರಷ್ಟು ನಿವೇಶನಗಳಿಗೆ ಬೇಡಿಕೆ ಇದೆ. ಸರಕಾರದ ಅನುದಾನದ ಆಧಾರದಲ್ಲಿ ಫಲಾನುಭವಿಗಳ ಮನೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ನಿವೇಶನಕ್ಕೆ ಜಾಗವನ್ನು ಗುರುತಿಸಿದ್ದು ಇದರ ದಾಖಲೆಗಳ ಪರಿಶೀಲನೆ ಅಂತಿಮ ಹಂತದಲ್ಲಿದ್ದು, ಪೂರ್ಣಗೊಂಡ ಕೂಡಲೆ ಆದ್ಯತೆ ಆಧಾರದಲ್ಲಿ ನಿವೇಶನ ಹಂಚಿಕೆ ಮಾಡಲಾಗುವುದು. -ಗಣೇಶ್ ಬಂಗೇರ, ಅಧ್ಯಕ್ಷ.

Exit mobile version