Site icon Suddi Belthangady

ಸುಂದರ ಮಲೆಕುಡಿಯ ಅವರ ಕೊಲೆಯತ್ನ ಪ್ರಕರಣ: 4 ಮಂದಿಗೆ ಜೈಲು ಶಿಕ್ಷೆ

ಬೆಳ್ತಂಗಡಿ: ಸುಮಾರು 10 ವರ್ಷಗಳ ಹಿಂದೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ನೆರಿಯ ಗ್ರಾಮದ ಕಾಟಾಜೆ ಎಂಬಲ್ಲಿ ನಡೆದಿದ್ದ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಫೆ. 19ರಂದು ಮಂದಿ ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗೋಪಾಲ ಗೌಡ ಯಾನೆ ಗೋಪಾಲಕೃಷ್ಣ ಗೌಡ, ಮಂಗಳೂರಿನ ಕುಡುಪು ಪಾಲ್ಡನೆಯ ಎ.ದಮಯಂತಿ, ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ವಸಂತ ಗೌಡ ಯಾನೆ ರಾಮಣ್ಣ ಗೌಡ ಮತ್ತು ನೆರಿಯ ಗ್ರಾಮದ ಪುಷ್ಪಲತಾ ಶಿಕ್ಷೆಗೊಳಗಾದವರು.

ಗೋಪಾಲ ಗೌಡನಿಗೆ 3 ವರ್ಷಗಳ ಕಾಲ ಕಠಿಣ ಸಜೆ ಮತ್ತು 1 ಲಕ್ಷ ರೂ. ದಂಡ ಹಾಗೂ ದಂಡ ತೆರಲು ವಿಫಲವಾದಲ್ಲಿ ಮತ್ತೆ 6 ತಿಂಗಳ ಸಾದಾ ಸಜೆ, ದಮಯಂತಿ, ವಸಂತ ಗೌಡ‌ ಮತ್ತು ಪುಷ್ಪಲತಾರಿಗೆ 2 ವರ್ಷ ಗಳ ಶಿಕ್ಷೆ ಮತ್ತು ತಲಾ 15 ಸಾವಿರ ರೂ. ದಂಡ ಹಾಗೂ ದಂಡ ತೆರಲು ವಿಫಲವಾದಲ್ಲಿ ಮತ್ತೆ 3 ತಿಂಗಳ ಸಾದಾ ಶಿಕ್ಷೆ ವಿಧಿಸಲಾಗಿದೆ.

ಸೆಕ್ಷನ್ 506ರ ಅಡಿ ನಾಲ್ಕು ಮಂದಿ ಆರೋಪಿಗಳಿಗೆ 6 ತಿಂಗಳ ಸಾದಾ ಶಿಕ್ಷೆ ವಿಧಿಸಿ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ತೀರ್ಪು ನೀಡಿದ್ದಾರೆ. ದಂಡದ ಮೊತ್ತ 1.45 ಲಕ್ಷ ರೂಪಾಯಿಯನ್ನು ಗಾಯಾಳು ಸುಂದರ ಮಲೆಕುಡಿಯ ಅವರಿಗೆ ಪರಿಹಾರವಾಗಿ ನೀಡಲು ಆದೇಶಿಸಿದ್ದಾರೆ.

ಘಟನೆಯ ವಿವರ: 2015ರ ಜು. 26ರಂದು ಸಂಜೆ ನೆರಿಯ ಗ್ರಾಮದ ಕಾಟಾಜೆ ಎಂಬಲ್ಲಿನ ಜಮೀನಿನಲ್ಲಿದ್ದ ಕಾಡನ್ನು ರೇವತಿ ಮತ್ತು ಬಿ.ಎ. ಸುಂದರ ಮಲೆಕುಡಿಯ ಅವರು ಮಕ್ಕಳಾದ ಪೂರ್ಣೇಶ್ ಮತ್ತು ಪೂರ್ಣಿಮಾರೊಂದಿಗೆ ಕಡಿಯುತ್ತಿ ದ್ದಾಗ ಆರೋಪಿಗಳು ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದದಿಂದ ಬೈದು ಕಳೆ ಕತ್ತರಿಸುವ ಯಂತ್ರದಿಂದ ಸುಂದರ ಮಲೆಕುಡಿಯರ ಕೈಬೆರಳುಗಳನ್ನು ತುಂಡರಿಸಿ ಗಂಭೀರ ಗಾಯಗೊಳಿಸಿದ್ದರು.

ಬಳಿಕ ಪರಾರಿಯಾಗಿದ್ದರು ಎಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಟ್ವಾಳ ಉಪವಿಭಾಗದ ಅಂದಿನ ಎ.ಎಸ್.ಪಿ ರಾಹುಲ್ ಕುಮಾರ್ ತನಿಖೆ ನಡೆಸಿದ್ದರು. ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿದ್ದ ಡಾ. ನಮ್ರತ್ ಭಾನು ಮತ್ತು ಎ.ಜೆ. ಆಸ್ಪತ್ರೆಯ ವೈದ್ಯ ಡಾ. ದಿನೇಶ್ ಕದಮ್, ಫೊರೆನ್ಸಿಕ್ ಲ್ಯಾಬ್‌ನ ಡಿಎನ್‌ಎ ವಿಭಾಗದ ತಜ್ಞೆ ಡಾ. ಶಹನಾಝ್ ಫಾತಿಮಾ ಸಹಿತ 29 ಮಂದಿ ಸರಕಾರದ ಪರವಾಗಿ ಸಾಕ್ಷಿ ನುಡಿದಿದ್ದರು.

ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ ವಾದಿಸಿದ್ದರು.

Exit mobile version