Site icon Suddi Belthangady

ಮರೋಡಿ: ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ – ಮಕ್ಕಳಲ್ಲಿ ಧಾರ್ಮಿಕ ಜಾಗೃತಿ ಹೆಚ್ಚಲಿ: ಮಹಾಬಲ ಕುಲಾಲ್‌

ಮರೋಡಿ: ಹಿಂದಿನ ಕಾಲದಲ್ಲಿ ಜನರಲ್ಲಿ ಬಡತನವಿದ್ದರೂ ಧಾರ್ಮಿಕ ಶ್ರೀಮಂತಿಕೆ ಇತ್ತು. ಆದರೆ, ಇಂದು ಸಿರಿತನವಿದ್ದರೂ ಧರ್ಮಾಚರಣೆಯಲ್ಲಿ ಬಡತನ ಕಾಣುತ್ತಿದೆ. ಈ ನಿಟ್ಟಿನಲ್ಲಿ ಶ್ರದ್ಧಾಕೇಂದ್ರಗಳ ಮೂಲಕ ಮಕ್ಕಳಲ್ಲಿ ಧಾರ್ಮಿಕ ಜಾಗೃತಿ ಕೆಲಸ ನಡೆಯಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್‌ ಹೇಳಿದರು.

ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಾರಾವಿ ವಿಭಾಗ ಇದರ ಮಾರ್ಗದರ್ಶನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮರೋಡಿ ಇದರ ಆಶ್ರಯದಲ್ಲಿ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಲ್ಲಿ ಶುಕ್ರವಾರ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮರೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರತ್ನಾಕರ ಬುಣ್ಣಾನ್‌, ಮರೋಡಿ ದೇವಸ್ಥಾನದ ಆಡಳಿತ ಸಮಿತಿ ಕಾರ್ಯದರ್ಶಿ ಜಯಂತ ಕೋಟ್ಯಾನ್‌ ಮಾತನಾಡಿದರು.

ಪೂಜಾ ಸಮಿತಿ ಅಧ್ಯಕ್ಷೆ ಸೌಮ್ಯಾ, ಪ್ರಗತಿ ಬಂಧು ಒಕ್ಕೂಟ ಅಧ್ಯಕ್ಷರಾದ ರಾಜುಪೂಜಾರಿ ಬೋವುರಿ, ರಾಜುಪೂಜಾರಿ ಹಜಂಕನಿ ಇದ್ದರು. ವಲಯ ಮೇಲ್ವಿಚಾರಕಿ ದಮಯಂತಿ ಸ್ವಾಗತಿಸಿದರು. ಯಶೋಧರ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಸೇವಾಪ್ರತಿನಿಧಿಗಳಾದ ಹರಿಣಾಕ್ಷಿ ಮತ್ತು ಶಶಿಕಲಾ ಇದ್ದರು.

Exit mobile version